ಊಹಾಪೋಹಕ್ಕೆಡೆಯಾದ ಸಚಿವ ಆನಂದ್ ಸಿಂಗ್ , ಡಿ.ಕೆ.ಶಿವಕುಮಾರ್ ಭೇಟಿ

ಬೆಂಗಳೂರು: ಮಹತ್ವದ ರಾಜಕೀಯ ಬೆಳವಣಿಗೆಯೊಂದರಲ್ಲಿ ಸಚಿವ ಆನಂದ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರ ನಿವಾಸಕ್ಕೆ ತೆರಳಿ ಮಾತುಕತೆ ನಡೆಸಿದ್ದಾರೆ. ಸರಿ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಉಭಯತ್ರರು ಚರ್ಚೆ ನಡೆಸಿದ್ದಾರೆ. ಸಚಿವ ಆನಂದ್ ಸಿಂಗ್ ಅವರು ಖಾಸಗಿ ಕಾರಿನಲ್ಲಿ ಆಗಮಿಸಿ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ವಿಶೇಷವಾಗಿದೆ. ಅವರು ಖಾಸಗಿ ಕಾರಿನಲ್ಲಿ ಬಂದು ಭೇಟಿಯಾಗಿದ್ದು ಯಾಕೆ ಎಂಬ ಪ್ರಶ್ನೆಯನ್ನು ಇದು ಹುಟ್ಟುಹಾಕಿದೆ.
ಸಿಎಂ ಬೊಮ್ಮಾಯಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಸಂಪುಟ ಪುನರ್ ರಚನೆಯಾದಾಗ ಆನಂದ್ ಸಿಂಗ್ ಅವರಿಗೆ ಅರಣ್ಯ ಮತ್ತು ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಇದರಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಆನಂದ್ ಸಿಂಗ್ ಪ್ರವಾಸೋದ್ಯಮ ಖಾತೆ ಬದಲಾವಣೆಗೆ ಪಟ್ಟು ಹಿಡಿದಿದ್ದರು. ಆದರೆ ಬಿಜೆಪಿ ಹೈಕಮಾಂಡ್ ಅದಕ್ಕೆ ಸೊಪ್ಪು ಹಾಕಿರಲಿಲ್ಲ.
ತಮ್ಮ ಪರಿಶ್ರಮ ಮತ್ತು ಒತ್ತಡದ ಪರಿಣಾಮವಾಗಿ ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆಯ ಉಸ್ತುವಾರಿಯನ್ನು ಆನಂದ್ ಸಿಂಗ್ ಬಯಸಿದ್ದರು. ಆದೂ ಕೈತಪ್ಪಿ ಕೊಪ್ಪಳ ಜಿಲ್ಲೆ ಉಸ್ತುವಾರಿಯನ್ನು ಅವರಿಗೆ ನೀಡಲಾಗಿದೆ.
ಗಣರಾಜ್ಯೋತ್ಸವ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯ ಜನ ನೋವಲ್ಲಿದ್ದಾರೆ. ನಾನು ಇಲ್ಲಿ ಧ್ವಜಾರೋಹಣಕ್ಕೆ ಬಂದಿದ್ದೇನೆ ಎನ್ನುವ ಮೂಲಕ ಬಹಿರಂಗವಾಗಿಯೇ ತಮ್ಮ ಅಸಮಾಧಾನವನ್ನು ಅವರು ಹೊರಹಾಕಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಆನಂದ್ ಸಿಂಗ್ ಕೆಪಿಸಿಸಿ ಅಧ್ಯಕ್ಷರನ್ನು ಖಾಸಗಿ ಕಾರಿನಲ್ಲಿ ಬಂದು ಭೇಟಿ ಮಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ಮತ್ತೆ ಕಾಂಗ್ರೆಸ್ ನತ್ತ ಮುಖ ಮಾಡಿದ್ದಾರೆ. ಇದರ ಪೂರ್ವಭಾವಿ ಚರ್ಚೆಗೆ ಅವರು ಡಿಕೆಶಿ ನಿವಾಸಕ್ಕೆ ಆಗಮಿಸಿದ್ದರು ಎನ್ನಲಾಗಿದೆ.
ಈ ನಡುವೆ, ಸಚಿವ ಆನಂದ್ ಸಿಂಗ್ ಭೇಟಿ ನಂತರ ಪ್ರತಿಕ್ರಿಯಿಸಿರುವ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮೇಕೆದಾಟು ಯೋಜನೆ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಚರ್ಚಿಸಲು ಅವರು ಆಗಮಿಸಿದ್ದರು ಎಂದು ಹೇಳಿಕೊಂಡರು. ಈ ಭೇಟಿಯಲ್ಲಿ ಯಾವುದೇ ರಾಜಕೀಯ ಮಹತ್ವ ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಆನಂದ್ ಸಿಂಗ್ ಕಾಂಗ್ರೆಸ್ಸಿನತ್ತ ಒಲವು ಬೀರಿದ್ದರೆ ರೆಸಾರ್ಟ್ ಅಥವಾ ಹೋಟೆಲ್ ನಲ್ಲಿ ರಹಸ್ಯವಾಗಿ ಭೇಟಿ ಮಾಡುತ್ತಿದ್ದರು. ಆದರೆ ಬಹಿರಂಗವಾಗಿಯೇ ಅವರು ನಮ್ಮ ಮನೆಗೆ ಬಂದು ಪ್ರವಾಸೋದ್ಯಮ ಕುರಿತು ಚರ್ಚೆ ನಡೆಸಿದ್ದಾರೆ ಎಂದೂ ಶಿವಕುಮಾರ್ ಹೇಳಿದರು.
ಆನಂದ್ ಸಿಂಗ್ ಸ್ಪಷ್ಟನೆ
ಡಿ.ಕೆ.ಶಿವಕುಮಾರ್ ಭೇಟಿ ಮಾಡಿದ ವೇಳೆ ಯಾವುದೇ ರಾಜಕೀಯ ವಿಷಯಗಳನ್ನು ತಾವು ಮಾತನಾಡಿಲ್ಲ ಎಂದು ಸಚಿವ ಆನಂದ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಇಲಾಖೆಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚೆ ನಡೆಸಿದ್ದೇನೆ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದು ಅವರು ಮನವಿ ಮಾಡಿದ್ದಾರೆ.
