Breaking NewsLatestಜಿಲ್ಲಾ ಸುದ್ದಿಮೆಟ್ರೋರಾಜ್ಯಸುದ್ದಿ

ಟೋಯಿಂಗ್, ಅತಿರೇಕದ ವರ್ತನೆ ಸಲ್ಲದು: ಮುಖ್ಯಮಂತ್ರಿ ಖಡಕ್ ಎಚ್ಚರಿಕೆ

ಬೆಂಗಳೂರು: ಟೋಯಿಂಗ್ ಗೆ ಸಂಬಂಧಿಸಿದಂತೆ ಸಾರ್ವಜನಿಕರೊಂದಿಗೆ ಅತಿರೇಕದ ವರ್ತನೆಯನ್ನು ಸರ್ಕಾರ ಸಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಟೋಯಿಂಗ್ ಬಗ್ಗೆ ಈಗಿರುವ ವ್ಯವಸ್ಥೆ ಬಗ್ಗೆ ಪುನರ್ ಪರಿಶೀಲನೆ ಮಾಡಲಾಗುತ್ತಿದೆ. ಈ ಬಗ್ಗೆ ನಾಳೆ ಪೊಲೀಸ್ ಆಯುಕ್ತರು, ಪೊಲೀಸ್ ಮಹಾ ನಿರ್ದೇಶಕರು ಹಾಗೂ ಟ್ರಾಫಿಕ್ ಪೊಲೀಸ್ ಅಧಿಕಾರಿಗಳ ಸಭೆ ಕರೆದು ಸಂಪೂರ್ಣವಾಗಿ ಪುನರ್ ಪರಿಶೀಲನೆ ಮಾಡಲು ತೀರ್ಮಾನಿಸಲಾಗಿದೆ.  ಹಲವಾರು ಬದಲಾವಣೆಗಳನ್ನು ತಂದು ಜನಸ್ನೇಹಿಯಾಗಿಸಲಿದ್ದೇವೆ ಎಂದರು.

ಈ ಹಿಂದೆ ಪೊಲೀಸ್ ಇಲಾಖೆಯೇ ಇದನ್ನು ಮಾಡುತ್ತಿತ್ತು, ಈಗ ಖಾಸಗಿ ಯವರಿಗೆ ಗುತ್ತಿಗೆ ನೀಡಲಾಗಿದೆ. ಹಲವಾರು ಘಟನೆಗಳ ಬಗ್ಗೆ ಗಮನಿಸಲಾಗಿದ್ದು, ಸಾರ್ವಜನಿಕರು ಕಾನೂನಿನ ಪ್ರಕಾರ ನಡೆದುಕೊಳ್ಳಬೇಕು. ಆದರೆ ಕಾನೂನಿನ ರಕ್ಷಣೆ ಮಾಡುವವರು ಸಾರ್ವಜನಿಕರೊಂದಿಗೆ ಅತ್ಯಂತ ಸೌಹಾರ್ದಯುತವಾಗಿ ವರ್ತಿಸಬೇಕು ಎಂದು ಹೇಳಿದರು.

ಚಿತ್ರಮಂದಿರಗಳಲ್ಲಿ ಆಸನ ವ್ಯವಸ್ಥೆ

ಕೋವಿಡ್ ನಿಯಮಗಳನ್ನು ಸಡಿಲಿಕೆ ಮಾಡಿರುವ ಬಗ್ಗೆ ಸಿನಿಮಾದವರು ಅಸಮಾಧಾನ ವ್ಯಕ್ತಪಡಿಸಿರುವ ಬಗ್ಗೆ ಉತ್ತರಿಸಿ, ಸಿನಿಮಾದವರಿಗೆ ಗೃಹ ಸಚಿವನಾಗಿ, ಮುಖ್ಯಮಂತ್ರಿಯಾಗಿ ಬಹಳಷ್ಟು  ಸವಲತ್ತುಗಳನ್ನು ನೀಡಲಾಗಿದೆ. ಅವರಿಂದ ಮನವಿ ಪಡೆದು  ಆಸನ ವ್ಯವಸ್ಥೆಗಳ ಬಗ್ಗೆ ತಾಂತ್ರಿಕ ತಜ್ಞರ ಸಲಹೆ ಮೇರೆಗೆ  ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಜನೀಶ್ ಚಿಕಿತ್ಸೆಗೆ ಸಹಾಯ

ಜನೀಶ್ ಎಂಬ ಮಗುವಿಗೆ ಚಿಕಿತ್ಸೆ ಗಾಗಿ 16 ಕೋಟಿ  ಅವಶ್ಯಕತೆ ಇದೆ. ಈ ರೀತಿಯ ಬಹಳಷ್ಟು ಮಕ್ಕಳಿದ್ದು, ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಂಡಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಈ  ಬಗ್ಗೆ  ಸಂಪೂರ್ಣ ವಿವರಗಳನ್ನು ಪಡೆದು, ಈ ಮೊತ್ತ ಏಕೆ ಬೇಕೆನ್ನುವ ಬಗ್ಗೆ ತಿಳಿದು, ಅಗತ್ಯ ಸಹಾಯ ಸಹಕಾರ ನೀಡುವ ಭರವಸೆ ನೀಡಿದರು. ಸಾರ್ವಜನಿಕರೂ ಸಹಾಯ ಮಾಡಬೇಕೆಂದು ಮಾಧ್ಯಮಗಳು ಕರೆ ನೀಡಿವೆ. ಸರ್ಕಾರವಾಗಿ  ಕೂಲಂಕುಷವಾಗಿ ಪರಿಶೀಲನೆ ಮಾಡಿ ಅದಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button