ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಾಲಕಾರ್ಮಿಕ ಸಾವು

ರಾಮನಗರ: ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿದು ಬಾಲಕಾರ್ಮಿಕ ಸಾವಿಗೀಡಾಗಿರುವ ಘಟನೆ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ. ಭೀಮ(13) ದುರ್ಘಟನೆಯಲ್ಲಿ ಸಾವಿಗೀಡಾದ ಕಾರ್ಮಿಕ. ಬಳ್ಳಾರಿ ಮೂಲದ ಈತ ಕೃಷ್ಣಾಪುರ ಗ್ರಾಮದ ಸಿದ್ದಪ್ಪ ಎಂಬುವರು ನಿರ್ಮಾಣ ಮಾಡುತ್ತಿದ್ದ ಮನೆಯಲ್ಲಿ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ.
ಕೆಲಸ ಮಾಡುತ್ತಿರುವ ಸಮಯದಲ್ಲಿ ಕಟ್ಟಡದ ಎರಡನೇ ಹಂತಸ್ತಿನ ಮೇಲ್ಛಾವಣಿ ಕುಸಿದು ಬಿದಿದ್ದೆ. ಈ ಸಮಯದಲ್ಲಿ ಕೆಳಗೆ ಕೆಲಸ ಮಾಡುತ್ತಿದ್ದ ಈತನ ಮೇಲೆ ಮುರಿದ ಗೋಡೆ, ಹಾಗೂ ಕಾಂಕ್ರೀಟ್ ಬಿದ್ದಿದೆ. ಗ್ರಾಮಸ್ಥರು ಜೆಸಿಬಿ ಸಹಾಯದಿಂದ ಕಟ್ಟಡದ ಅವಶೇಷಗಳನ್ನು ತೆಗೆದಿದ್ದಾರಾದರೂ ಈತ ಉಸಿರುಗಟ್ಟಿ ಸ್ಥಳದಲ್ಲೇ ಸಾವಿಗೀಡಾಗಿದ್ದ.
ಘಟನೆಗೆ ಸಂಬಂಧಿಸಿದಂತೆ ಅಕ್ಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಕೂಲಿ ಕೆಲಸಕ್ಕಾಗಿ ದೂರದ ಊರಿನಿಂದ ಬಂದ ಈ ಬಾಲಕಾರ್ಮಿಕ ಈರೀತಿ ಸಾವಿಗೀಡಾಗಿರುವುದು ದುರಾದೃಷ್ಟ ಸಂಗತಿಯೇ ಸರಿ. ಕಾರ್ಮಿಕ ಇಲಾಖೆ ಬೇಜವಾಬ್ದಾರಿ: ತಾಲೂಕಿನಲ್ಲಿ ಕಟ್ಟಡ ಕಾಮಗಾರಿ ಸೇರಿದಂತೆ ವಿವಿಧ ಕಾರ್ಖಾನೆಗಳು ಹಾಗೂ ಬೇರೆಡೆಗಳಲ್ಲಿ ಬಾಲಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಬಾಲಕಾರ್ಮಿಕರನ್ನು ಕೆಲಸಕ್ಕೆ ಇರಿಸಿಕೊಳ್ಳುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದ್ದರೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಸುಮ್ಮನೆ ಇದ್ದಾರೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಕಟ್ಟಡ ನಿರ್ಮಾಣದಂತಹ ಅಪಾಯಕಾರಿ ಕೆಲಸಗಳಲ್ಲಿ ಸಾಕಷ್ಟು ಬಾಲಕಾರ್ಮಿಕರನ್ನು ಬಳಕೆ ಮಾಡಲಾಗುತ್ತಿದ್ದು, ಇದನ್ನು ಕೇಳುವವರು ಹೇಳುವವರು ಯಾರೂ ಇಲ್ಲದಂತಾಗಿದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಕೇವಲ ಕಾರ್ಮಿಕರ ಕಾರ್ಡ್‍ನೀಡುವುದಕ್ಕೆ ಮಾತ್ರ ಸೀಮಿತವಾಗಿದ್ದು, ಇಲಾಖೆಯ ಇತರ ಕೆಲಸಗಳ ಬಗ್ಗೆ ಉದಾಸೀನ ಮಾಡುತ್ತಿದ್ದಾರೆ ಎಂಬುದುಕ್ಕೆ ಈ ಅವಘಡವೇ ಸಾಕ್ಷಿಯಾಗಿದೆ.
