ಸಿದ್ದು, ಡಿಕೆಶಿ ನಡುವೆ ಆಂತರೀಕ ಸಂಘರ್ಷವಿದೆ: ಸಿಎಂ ಬೊಮ್ಮಾಯಿ

ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಆಂತರೀಕ ಸಂಘರ್ಷ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಅವರು, ಬಿಜೆಪಿ-ಜೆಡಿಎಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಈ ಇಬ್ಬರೂ ನಾಯಕರೂ ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಹಳಷ್ಟು ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಮಂಗಳವಾರ ಸಿದ್ದರಾಮಯ್ಯ ಹೇಳಿದ್ದರು. ಆದರೆ ಬುಧವಾರ ಚುನಾವಣೆ ಸಂದರ್ಭದಲ್ಲಿ ಕೆಲವು ಶಾಸಕರು ಕಾಂಗ್ರೆಸ್ ಸೇರಬಹುದು ಎನ್ನುತ್ತಿದ್ದಾರೆ. ಇದರಿಂದಲೇ ಸಿದ್ದರಾಮಯ್ಯ ಹೇಳಿಕೆ ಸುಳ್ಳು ಎಂದು ಗೊತ್ತಾಗುತ್ತದೆ ಎಂದರು.
ಕಾಂಗ್ರೆಸ್ ಅಪ್ರಸ್ತುತ
ಡಿ.ಕೆ.ಶಿವಕುಮಾರ್ ಒಂದು ಹೇಳಿಕೆ ನೀಡಿದರೆ, ನನ್ನದೂ ಇರಲಿ ಎಂದು ಸಿದ್ದರಾಮಯ್ಯ ಒಂದು ಹೇಳಿಕೆ ನೀಡುತ್ತಾರೆ. ಹೀಗಾಗಿ ಇದು ಅವರಿಬ್ಬರ ನಡುವಿನ ಆಂತರೀಕ ಸಂಘರ್ಷದ ವಿಷಯ ಎಂದು ಹೇಳಿದ ಸಿಎಂ ಒಟ್ಟಾರೆ, ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಅಪ್ರಸ್ತುತವಾಗುತ್ತಿದೆ ಎಂದೂ ಸಿಎಂ ವಾಗ್ದಾಳಿ ನಡೆಸಿದರು.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರ ಮಾಡಲು ಆಗಲ್ಲ ಎಂಬ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಸಿಎಂ, ಕುಮಾರಸ್ವಾಮಿ ಅವರ ಸದಾಶಯ ಸದಾ ಹಾಗೇಯೇ ಇರುತ್ತದೆ ಎಂದು ಟಾಂಗ್ ನೀಡಿದರು.
ರಮೇಶ್ ಜಾರಕಿಹೊಳಿ ಸಂಪರ್ಕದಲ್ಲಿ ಯಾರು ಇದ್ದಾರೆ ಎಂಬುದರ ಕುರಿತು ವಿಚಾರಣೆ ಮಾಡುತ್ತೇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ಬೇಜವಾಬ್ದಾರಿಯಾಗ ಮಾತನಾಡಲು ಸಾಧ್ಯವಿಲ್ಲ. ಅತಂತ್ರ ಫಲಿತಾಂಶ ಬಂದರೆ ಜೆಡಿಎಸ್ ಗೆ ಸ್ವಾತಂತ್ರ್ಯ ಸಿಗುತ್ತದೆ ಎಂದೂ ಮುಖ್ಯಮಂತ್ರಿ ಬೊಮ್ಮಾಯಿ ವ್ಯಂಗ್ಯವಾಡಿದರು.
