ಮನರಂಜನೆಸಿನಿಮಾಸೆಲೆಬ್ರಿಟಿ

ಜೇಮ್ಸ್ ಚಿತ್ರದಲ್ಲಿ ಇರಲಿದೆ ಪವರ್ ಸ್ಟಾರ್ ಧ್ವನಿ

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಜೇಮ್ಸ್ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇದೆ. ಚಿತ್ರದ ಪೋಸ್ಟರ್ ಹೊರತು ಪಡಿಸಿ ಯಾವ ಗುಟ್ಟನ್ನು ಚಿತ್ರತಂಡ ಇದುವರೆಗೂ ಬಿಟ್ಟುಕೊಟಿಲ್ಲ. ಹೀಗಾಗಿ ಚಿತ್ರದ ಅಪ್​ಡೇಟ್​ಗಾಗಿ ಕಾದು ಕೂತಿರೋ ಅಭಿಮಾನಿಗಳಿಗೆ ಜೇಮ್ಸ್ ಚಿತ್ರತಂಡದ ಕಡೆಯಿಂದ ಹೊಸ ಸುದ್ದಿಯೊಂದು ಸಿಕ್ಕಿದೆ.

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ನಟನೆಯ ಕೊನೆಯ ಸಿನಿಮಾ ಜೇಮ್ಸ್. ಹೀಗಾಗಿ ಈ ಚಿತ್ರದ ಮೇಲೆ ಇನ್ನಿಲ್ಲದ ಕುತೂಹಲ ಶುರುವಾಗಿದೆ. 99% ಚಿತ್ರೀಕರಣ ಕಂಪ್ಲೀಟ್ ಮಾಡಿದ್ದ ಅಪ್ಪು ಕೊನೆಯ ಹಾಡಿನ ಚಿತ್ರೀಕರಣವೊಂದನ್ನ ಬಾಕಿ ಉಳಿಸಿಕೊಂಡಿದ್ದರು. ಆದರೆ ಅಷ್ಟರಲ್ಲಾಗಲೇ ಪುನೀತ್ ಇಹಲೋಕ ತ್ಯಜಿಸಿದ್ರು. ಹೀಗಾಗಿ ಬಾಕಿ ಇದ್ದ ಒಂದು ಹಾಡನ್ನ ಚಿತ್ರತಂಡ ಕೈ ಬಿಟ್ಟಿದ್ದು ಇದರಿಂದ ಚಿತ್ರಕ್ಕೆ ಯಾವುದೇ ರೀತಿಯ ತೊಂದರೆ ಇಲ್ಲವಂತೆ.

ಇನ್ನೂ ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರು ಧ್ವನಿಯಾಗ್ತಾರೆ ಅನ್ನೋ ಕುರಿತು ಸಾಕಷ್ಟು ಚರ್ಚೆಯಾಗ್ತಿದೆ. ಈ ಹಿಂದೆ ನಟ ಶಿವರಾಜ್ ಕುಮಾರ್ ಧ್ವನಿ ನೀಡ್ತಾರೆ ಅನ್ನೊ ಸುದ್ದಿ ಕೇಳಿ ಬಂದಿತ್ತು. ಆದ್ರೆ ಅದು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸಾಕಷ್ಟು ಮಂದಿ ಮಿಮಿಕ್ರಿ ಆರ್ಟಿಸ್ಟ್​ಗಳನ್ನ ರಿಹರ್ಸೆಲ್ ಮಾಡಿದ್ದಾರಂತೆ. ಆದ್ರೆ ಯಾರು ಕೂಡ ಅಪ್ಪು ಅವರ ಧ್ವನಿಯನ್ನ ಅನುಕರಣೆ ಮಾಡಲು ಸೂಕ್ತವಾಗಿಲ್ಲವಂತೆ.

ಸ್ಟೇಜ್ ಮೇಲೆ 3-4 ನಿಮಿಷಗಳ ಕಾಲ ಧ್ವನಿಯನ್ನ ಅನುಕರಣೆ ಮಾಡೋಕೆ ಸಾಧ್ಯ. ಅದೇ 2.30 ಗಂಟೆಗಳ ಕಾಲ ಪುನೀತ್ ಅವರ ರೀತಿಯಲ್ಲಿ ಮಾತನಾಡಲು ಅಸಾಧ್ಯ ಅನ್ನೋ ಕಾರಣಕ್ಕೆ ಅದನ್ನ ಕೈ ಬಿಟ್ಟಿದೆ ಚಿತ್ರತಂಡ.

ಹೀಗಾಗಿ ಜೇಮ್ಸ್ ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಅವರ ಧ್ವನಿಯನ್ನೇ ಉಳಿಸಿಕೊಳ್ಳಲು ಚಿತ್ರತಂಡ ಮುಂದಾಗಿದೆ. ಶೂಟಿಂಗ್ ಸಮಯದಲ್ಲಿ ಪುನೀತ್ ಮಾತನಾಡಿದ ಧ್ವನಿಯನ್ನ ರೆಕಾರ್ಡ್ ಮಾಡಿಕೊಂಡಿದ್ದು ಅದನ್ನೇ ಸಿನಿಮಾಗೂ ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದೆಯಂತೆ.

ಚಿತ್ರೀಕರಣ ಸಂದರ್ಭದಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಅಪ್ಪು ಧ್ವನಿಯನ್ನ ಈಗಾಗ್ಲೆ ಪುಣೆ, ಹೈದರಾಬಾದ್, ಮುಂಬೈ ಹಾಗೂ ಲಂಡನ್​ಗೆ ಕಳುಹಿಸಿಕೊಡಲಾಗಿದೆಯಂತೆ. ಅಲ್ಲಿ ಪರಿಷ್ಕರಿಸಿ ಉತ್ತಮಗೊಳಿಸಿ ನೀಡುವ ಧ್ವನಿಯನ್ನೇ ಚಿತ್ರಕ್ಕೆ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದೆಯಂತೆ.

Spread the love

Related Articles

Leave a Reply

Your email address will not be published. Required fields are marked *

Back to top button