ಪಾಲಿಕೆಗೆ ವಂಚನೆ: ಬಿಬಿಎಂಪಿ ಇಂಜಿನಿಯರ್ ಸೇರಿದಂತೆ ನಾಲ್ವರ ವಿರುದ್ಧ ಎಫ್ ಐ ಆರ್

ಬೆಂಗಳೂರು: ಬಿಬಿಎಂಪಿ ಕೇಂದ್ರ ಕಛೇರಿಯಲ್ಲಿರುವ “ಸಾರಿಗೆ ವಿಭಾಗ” ದ ಕಾರ್ಯಪಾಲಕ ಅಭಿಯಂತರ ಮಹದೇವ್, ಗುಮಾಸ್ತ ರಮೇಶ್, ಕಂಪ್ಯೂಟರ್ ಆಪರೇಟರ್, ಸತೀಶ್ ಮತ್ತು ಪಂಚಮುಖಿ ಟೂರ್ಸ್ & ಟ್ರಾವೆಲ್ಸ್ ಮಾಲೀಕ ಶಿವಾನಂದ ವಿರುದ್ಧ ಅಲಸೂರು ಗೇಟ್ ಪೋಲಿಸ್ ಠಾಣೆ ಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
IPC 1860 ( U/S 34, 120 B, 420, 465, 468, 471) ಅಡಿಯಲ್ಲಿ ವಂಚನೆ, ನಕಲಿ ದಾಖಲೆ ತಯಾರಿಕೆ, ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಹಿಂದೆ ಪಾಲಿಕೆಯ ಅಧಿಕಾರಿಗಳ ಬಳಕೆಗೆಂದು ಗುತ್ತಿಗೆ ಆಧಾರದಲ್ಲಿ ವಾಹನಗಳನ್ನು ಒದಗಿಸುತ್ತಿದ್ದ ಟ್ರಾವೆಲ್ಸ್ ಗಳ ಪೈಕಿ ಒಂದಾಗಿರುವ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆ ತನ್ನ ಚಾಲಕರು / ಸಿಬ್ಬಂದಿ ವರ್ಗದವರಿಗೆ ಪಾವತಿಸುತ್ತಿದ್ದ ಪಿಎಫ್/ಇಎಸ್ ಐ ದಾಖಲೆಗಳನ್ನು ಆ ಸಂಸ್ಥೆಯು ಪಾಲಿಕೆಗೆ ನೀಡುತ್ತಿದ್ದ ಕಡತಗಳಿಂದ ತೆಗೆದು, ಅವುಗಳನ್ನೇ ಪಂಚಮುಖಿ ಟೂರ್ಸ್ ಅಂಡ್ ಟ್ರಾವೆಲ್ಸ್ ಹೆಸರಿನಲ್ಲಿ ನಕಲು ಮಾಡಿ ಪಾಲಿಕೆಗೆ ಲಕ್ಷಾಂತರ ರೂಪಾಯಿ ವಂಚಿಸಿದ್ದರು ಎನ್ನಲಾಗಿದೆ.
ಈ ಬಗ್ಗೆ ದಾಖಲೆಗಳ ಸಹಿತ ಎಂ.ಎಂ.ಲಾಜಿಸ್ಟಿಕ್ಸ್ ಟೂರ್ಸ್ ಮತ್ತು ಟ್ರಾವೆಲ್ಸ್ ಸಂಸ್ಥೆಯ ವ್ಯವಸ್ಥಾಪಕ ವಿನಯ್ ಬಾಬು ನೀಡಿರುವ ದೂರಿನನ್ವಯ ಆರೋಪಿಗಳ ವಿರುದ್ಧ ಅಲಸೂರು ಗೇಟ್ ಪೋಲೀಸರು ಎಫ್ ಐ ಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
