ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಚಿವ ಉಮೇಶ್ ಕತ್ತಿ ನಿವಾಸದಲ್ಲಿ ರಹಸ್ಯ ಸಭೆ

ವಿಶೇಷ ವರದಿ
ಬೆಂಗಳೂರು : ರಾಜ್ಯದಲ್ಲಿ ಇದೀಗ ಸಚಿವ ಸಂಪುಟ ವಿಸ್ತರಣೆ ಕುರಿತಾಗಿ ಚರ್ಚೆಗಳು ಕೇಳಿ ಬರುತ್ತಿವೆ. ಸಚಿವ ಸಂಪುಟ ವಿಚಾರಕ್ಕೆ ಸಂಬಂಧಿಸಿದ್ದಂತೆ ಸಿಎಂ ಬಸವರಾಜ ಬೊಮ್ಮಾಯಿ ಅವರು ದೆಹಲಿ ವರಿಷ್ಠರೊಂದಿಗೆ ಮಾತುಕತೆ ನಡೆಸಲು ಸಿದ್ಧತೆ ನಡೆಸಿದ್ದಾರೆ. ಇದೇ ವೇಳೆ ಸಚಿವ ಉಮೇಶ್ ಕತ್ತಿ ಅವರು ಬೆಳಗಾವಿಯಲ್ಲಿ ಜಾರಕಿಹೊಳಿ ಸಹೋದರರನ್ನು ದೂರವಿಟ್ಟು ಸಭೆ ನಡೆಸಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಸಂಪುಟ ಪುನಾರಚನೆಗೆ ರಾಜ್ಯ ಸರ್ಕಾರ ಸಿದ್ಧತೆ ನಡೆಸಿದೆ. ಸಚಿವ ಸ್ಥಾನ ಕಳೆದುಕೊಂಡ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಪುನಃ ಸಚಿವ ಸ್ಥಾನವನ್ನು ಪಡೆದುಕೊಳ್ಳಲು ದೆಹಲಿ ವರಿಷ್ಠರು, ರಾಜ್ಯ ಬಿಜೆಪಿ ನಾಯಕರು ಸೇರಿದಂತೆ ಆರ್ಎಸ್ಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಿ, ಮರಳಿ ಸಚಿವ ಸ್ಥಾನಕ್ಕಾಗಿ ಬೇಡಿಕೆಯಿಟ್ಟಿದ್ದಾರೆ. ಆದರೆ, ಬೆಳಗಾವಿಯಲ್ಲಿ ಸಚಿವ ಉಮೇಶ್ ಕತ್ತಿ ಅವರು ತಮ್ಮ ನಿವಾಸದಲ್ಲಿ ಪಕ್ಷದ ಕೆಲವು ಮುಖಂಡರೊಂದಿಗೆ ಸಭೆ ನಡೆಸಿ ಕುತೂಹಲ ಮೂಡಿಸಿದ್ದಾರೆ.
ಉಮೇಶ್ ಕತ್ತಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಕುಡುಚಿ ಶಾಸಕರಾದ ಪಿ.ರಾಜೀವ್, ಅಭಯ ಪಾಟೀಲ್, ಅನಿಲ್ ಬೆನಕೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಜಿಲ್ಲೆಯ ಶಾಸಕರು ಪ್ರಭಾವಿ ನಾಯಕರು ಭಾಗಿಯಾಗಿದ್ದರು.
ಆದರೆ, ಈ ವೇಳೆ ಜಾರಕಿಹೊಳಿ ಸಹೋದರರನ್ನು ದೂರವಿಡಲಾಗಿದೆ. ಸಚಿವ ಸಂಪುಟ ವಿಸ್ತರಣೆ ಆದಲ್ಲಿ ಪಿ.ರಾಜೀವ್ ಮತ್ತು ಅಭಯ ಪಾಟೀಲ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕು ಎಂಬುವ ವಿಚಾರವನ್ನು ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎನ್ನಲಾಗುತ್ತಿದೆ. ಆದರೆ, ಈ ಸಭೆಗೆ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಅವರಿಗೆ ಆಹ್ವಾನವಿರಲಿಲ್ಲ ಎನ್ನಲಾಗುತ್ತಿದೆ.
