ವೀಕೆಂಡ್ ಕರ್ಫ್ಯೂ ರದ್ದು, ನೈಟ್ ಕರ್ಫ್ಯೂ ಮುಂದುವರಿಕೆ: ಸರ್ಕಾರದ ಅಧಿಕೃತ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ವೀಕೆಂಡ್ ಕರ್ಫ್ಯೂ ರದ್ದುಪಡಿಸಿ ರಾಜ್ಯ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಕೋವಿಡ್ ಪ್ರಕರಣಗಳು ಹೆಚ್ಚಾಗಿ ಆಸ್ಪತ್ರೆಗಳಿಗೆ ದಾಖಲಾಗುವವರ ಸಂಖ್ಯೆ ಹೆಚ್ಚಾದರೆ ಮತ್ತೆ ವಾರಂತ್ಯದ ಕರ್ಫ್ಯೂ ಜಾರಿಗೊಳಿಸಲಾಗುವುದು ಎಂದು ಉನ್ನತಮಟ್ಟದ ಸಭೆ ನಂತರ ಕಂದಾಯ ಸಚಿವ ಆರ್.ಅಶೋಕ್ ಸುದ್ದಿಗಾರರಿಗೆ ತಿಳಿಸಿದರು. ರಾತ್ರಿ ಕರ್ಫ್ಯೂ ಎಂದಿನಂತೆ ರಾತ್ರಿ 10 ರಿಂದ ಬೆಳಗ್ಗೆ 5 ಗಂಟೆವರೆಗೆ ಮುಂದುವರಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಉಳಿದಂತೆ ರಾಜ್ಯದಲ್ಲಿ ಕೋವಿಡ್ ಕಠಿಣ ನಿಮಯಗಳು ಎಂದಿನಂತೆ ಮುಂದುವರಿಯಲಿವೆ. ತಜ್ಱರ ಅಭಿಪ್ರಾಯದಂತೆ ವೀಕೆಂಡ್ ಕರ್ಫ್ಯೂ ರದ್ದುಪಡಿಸಲಾಗಿದೆ. ಜನತೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದರು.
ಬಾರ್, ಕ್ಲಬ್, ರೆಸ್ಟೋರೆಂಟ್ ಮತ್ತು ಹೋಟೆಲ್ ಗಳ ಚಟುವಟಿಕೆ ನಿರ್ಬಂಧಿಸಲು ರಾತ್ರಿ ಕರ್ಫ್ಯೂ ಮುಂದುವರಿಲಾಗಿದೆ. ವೀಕೆಂಡ್ ಸೇರಿದಂತೆ ಉಳಿದ ದಿನಗಳಲ್ಲಿ ಎಂದಿನಂತೆ ಅವುಗಳ ಸಾಮರ್ಥ್ಯದ ಶೇ.50 ರಷ್ಟು ಮಂದಿಗೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಪಾಸಿಟಿವಿಟಿ ದರ ಹೆಚ್ಚಿರುವುದರಿಂದ ಜ.29 ವರೆಗೆ ಶಾಲೆ-ಕಾಲೇಜು ಬಂದ್ ಆಗಿರುತ್ತವೆ. ಜ.29ರ ನಂತರ ಬೆಂಗಳೂರು ಕೋವಿಡ್ ಸ್ಥಿತಿಗತಿ ಪರಿಶೀಲನೆ ನಂತರ ಮುಂದಿನ ತೀರ್ಮಾನ ತೆಗೆದು ಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಡಿ.ಸಿ.ನಾಗೇಶ್ ತಿಳಿಸಿದರು. ರಾಜ್ಯದ ಉಳಿದೆಡೆ ಮಕ್ಕಳಿಗೆ ಸೋಂಕು ಹೆಚ್ಚಾದರೆ ಮಾತ್ರ ಶಾಲೆ ಬಂದ್ ಮಾಡಲಾಗುವುದು, ಮಕ್ಕಳಲ್ಲಿ ಸೋಂಕು ಪ್ರಮಾಣ ಶೇ.3ಕ್ಕಿಂತ ಕಡಿಮೆ ಇದ್ದರೆ ಮೂರು ದಿನ ಶಾಲೆ ಬಂದ್, 25 ರಿಂದ 30 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಅಂತಹ ಶಾಲೆಗಳನ್ನು 7 ದಿನ ಬಂದ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
