
ನವದೆಹಲಿ: ದೇಶದಲ್ಲಿ ಮತ್ತೆ ಅಧಿಕಾರ ಹಿಡಿಯಬೇಕಾದರೆ ಉತ್ತರಪ್ರದೇಶದಲ್ಲಿ ಬಿಜೆಪಿ ಗೆಲುವು ಅನಿವಾರ್ಯ ಎಂಬುದನ್ನು ಮನಗಂಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಷಾ ಜೋಡಿ ಉತ್ತರ ಪ್ರದೇಶ ಚುನಾವಣೆ ಪ್ರಚಾರದ ಜವಾಬ್ದಾರಿಯನ್ನು ತಾವಿಬ್ಬರೇ ನಿರ್ವಹಿಸಲು ತೀರ್ಮಾನಿಸಿದ್ದಾರೆ. ಕೋರೋನ ಕಾರಣದಿಂದ ಆಯೋಗದ ಕಟ್ಟುಪಾಡುಗಳು ಜಾರಿಯಲ್ಲಿರುವೆ. ಹೀಗಾಗಿ ಸಾಮಾಜಿಕ ಜಾಲತಾಣಗಳನ್ನು, ಆಧುನಿಕ ತಂತ್ರಜ್ಞಾನವನ್ನು ಸಂಪೂರ್ಣ ಬಳಕೆ ಮಾಡಿಕೊಂಡು ಅವುಗಳ ಮೂಲಕವೇ ಜನರ, ಮತದಾರನ ಮನಸ್ಸು ಗೆಲ್ಲುವ ವಿನೂತನ ಪ್ರಯತ್ನಕ್ಕೆ , ಪ್ರಚಾರಕ್ಕೆ ಬಿಜೆಪಿ ಮೊರೆ ಹೋಗಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್, ಟ್ವಿಟರ್ ಇನ್ಸಟೆಗ್ರಾಮ್ , ವಾಟ್ಸಾಪ್ ಮೂಲಕವೇ ಜನರ ಮನಗೆಲ್ಲಲು ಬಿಜೆಪಿ ಹೈಬ್ರಿಡ್ ಪ್ರಚಾರ ತಂತ್ರಕ್ಕೆ ಪಕ್ಷ ಮೊರೆಹೋಗಿದೆ.
ಇದಕ್ಕಾಗಿ ನುರಿತ ಸಾಫ್ಟ್ವೇರ್ ತಜ್ಞರ ತಂಡವನ್ನು ನೇಮಕ ಮಾಡಿಕೊಂಡಿದೆ ಎಂದು ಹೇಳಲಾಗಿದೆ. ಇದೆ 22ರಿಂದ ಕೇಂದ್ರ ಸಚಿವ ರಾಜನಾಥ್ ಸಿಂಗ್ ಮತ್ತು ಅಮಿತ್ ಷಾ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡುವ ಮೂಲಕ ಮುಂದಿನ ಆಟವನ್ನು ಮೋದಿ ಮತ್ತು ಷಾ ಹೆಗಲಿಗೆ ವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ದೊಡ್ಡಮಟ್ಟದ ಸಭೆ ಮಾಡುವುದಕ್ಕಿಂತ ಬದಲಿಗೆ ಸಣ್ಣ , ಸಣ್ಣ ಸಭೆ ಮಾಡಿ ಅದನ್ನು ನೇರ ಪ್ರಸಾರ ಮಾಡಿ ಮತದಾರನ ಮನಗೆಲ್ಲುವ ನವೀನ ತಂತ್ರಜ್ಞಾನ ಆಧಾರಿತ ಪ್ರಚಾರಕ್ಕೆ ಬಿಜೆಪಿ ಮೊರೆಹೋಗಲಿದೆ.
