
Arvind Kejriwal Promise ನವದೆಹಲಿ: ಗೋವಾದ ಜನತೆ ಆಮ್ ಆದ್ಮಿ ಪಕ್ಷ ಎಎಪಿ ಗೆ ಅಧಿಕಾರ ನೀಡಿದರೆ ಪ್ರತಿ ಕುಟುಂಬಕ್ಕೂ ಹತ್ತು ಲಕ್ಷ ರೂಪಾಯಿ ಆರ್ಥಿಕ ಸೌಲಭ್ಯವನ್ನು ಜನತೆಗೆ ಕಲ್ಪಿಸಿಕೊಡುವುದಾಗಿ ದೆಹಲಿ ಮುಖ್ಯಮಂತ್ರಿ ಹಾಗೂ ಆಪ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅರವಿಂದ್ ಕೇಜ್ರಿವಾಲ್ ಭರವಸೆ ನೀಡಿದ್ದಾರೆ.ಗೋವಾ ವಿಧಾನಸಭಾ ಚುನಾವಣೆಗಾಗಿಯೇ ಪಕ್ಷ 13 ಪ್ರಮುಖ ಅಂಶಗಳನ್ನು ಪಟ್ಟಿ ಮಾಡಿದೆ. ಜನತೆ ತಮ್ಮ ಪಕ್ಷಕ್ಕೆ ಐದು ವರ್ಷಗಳ ಅಧಿಕಾರ ಕೊಟ್ಟರೆ ಐದು ವರ್ಷಗಳ ಕೊನೆಯಲ್ಲಿ ಪ್ರತಿಯೊಂದು ಕುಟುಂಬವೂ ತಲಾ ಹತ್ತು ಲಕ್ಷ ರೂಪಾಯಿ ಸರ್ಕಾರಿ ಪ್ರಯೋಜನ ಪಡೆಯುವಂತೆ ಮಾಡಲಾಗುವುದು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಭೂರಹಿತ ಕುಟುಂಬಗಳಿಗೆ ಭೂಮಿ ನೀಡುವುದು ಮತ್ತು ನಿರುದ್ಯೋಗಿ ಯುವಕರಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ನೀಡಲಾಗುವುದು ಹಾಗೂ ಜನರ ಬದುಕನ್ನು ಹಸನುಗೊಳಿಸಲು ಆರೋಗ್ಯ, ಶಿಕ್ಷಣ, ವ್ಯಾಪಾರ, ಕೈಗಾರಿಕೆ, ಗಣಿ ಮತ್ತು ಮೂಲಸೌಕರ್ಯ ವಲಯದಲ್ಲಿ ಆಮೂಲಾಗ್ರ ಬದಲಾವಣೆ ತರಲಾಗುವುದು ಎಂದೂ ಪಕ್ಷ ಜನತೆಗೆ ಭರವಸೆ ಕೊಟ್ಟಿದೆ.
