ದಾಂಡೇಲಿಯಲ್ಲಿ ಕೋವಿಡ್ ಪ್ರಚಾರಕ್ಕೆ ಬಂದ ಯುವಕ ನೀರುಪಾಲು

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಮೌಳಂಗಿ ಇಕೋ ಪಾರ್ಕ್ ಬಳಿ ಕಾಳಿ ನದಿಯಲ್ಲಿ ಈಜಲು ಹೋಗಿ ಕೊಚ್ಚಿಕೊಂಡು ಹೋದ ಯುವಕನ ಮೃತದೇಹವು ಶುಕ್ರವಾರ ಚಿಕ್ಕ ಸಂಗಮದಲ್ಲಿ ಪತ್ತೆಯಾಗಿದೆ.
ಹುಬ್ಬಳ್ಳಿಯ “104” ಸಹಾಯವಾಣಿಯಲ್ಲಿ ಕೆಲಸ ಮಾಡುವ ಆರು ಜನ, ದಾಂಡೇಲಿಗೆ ಕೋವಿಡ್ ಮುನ್ನೆಚ್ಚರಿಕೆಯ ಪ್ರಚಾರಕ್ಕಾಗಿ ನಗರಕ್ಕೆ ಬಂದಿದ್ದರು. ಇವರಲ್ಲಿ ಹುಬ್ಬಳ್ಳಿ ಶೀಲಾ ಕಾಲೋನಿಯ ನಿವಾಸಿ ಆನಂದ ಸಿಂಗ್ ಲಕ್ಷ್ಮಣ ಸಿಂಗ್ (32) ಎಂಬುವವರು ಕಾಳಿ ನದಿಯಲ್ಲಿ ಈಜಾಟದಲ್ಲಿ ತೊಡಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು, ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದರು.
ದಾಂಡೇಲಿ ಮಾನಸಾ ಅಡ್ವೆಂಚರ್ ತಂಡ ಹಾಗೂ ಜೊಯಿಡಾ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಎರಡು ದಿನದ ಶೋಧ ಕಾರ್ಯ ನಡೆಸಿ ಮೃತದೇಹವನ್ನು ಪತ್ತೆ ಮಾಡಿದ್ದಾರೆ.ಘಟನೆ ಸಂಬಂಧ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿವೈಎಸ್ಪಿ ಕೆ.ಎಲ್.ಗಣೇಶ, ಸಿಪಿಐ ಪ್ರಭು ಗಂಗನಹಳ್ಳಿ, ಗ್ರಾಮೀಣ ಠಾಣೆ ಪಿಎಸ್ಐ ಐ. ಆರ್.ಗಡ್ಡೇಕರ, ಯಲ್ಲಾಲಿಂಗ ಕೊಣ್ಣೂರು ಹಾಗೂ ಇತರ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




