
ಬೆಂಗಳೂರು: ಕೋವಿಡ್ ಸಾಂಕ್ರಮಿಕ ಸಂದರ್ಭದಲ್ಲಿ ಪಾದಯಾತ್ರೆ ಸೇರಿದಂತೆ ರಾಜಕೀಯ ಸಮಾವೇಶ, ಜನಸ್ತೋಮ, ಮತ್ತು ಸಾರ್ವಜನಿಕ ಸಭೆಗಳಿಗೆ ಅವಕಾಶ ನೀಡದಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಮುಖ್ಯನ್ಯಾಯಮೂರ್ತಿ ರಿತುರಾಜು ಅವಸ್ಥಿ ನೇತೃತ್ವದ ಪೀಠವು, ಪ್ರದೇಶ ಕಾಂಗ್ರೆಸ್ ಆಯೋಜಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ನಿಷೇಧಿಸುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಸಂದರ್ಭದಲ್ಲಿ ಸಾಂಕ್ರಮಿಕದ ವೇಳೆ ಪ್ರಮಾಣಿತ ಕಾರ್ಯಾಚರಣೆ ವಿಧಾನ(ಎಸ್ ಓಪಿ)ವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಕೆಪಿಸಿಸಿ ಪರ ವಾದ ಮಂಡಿಸಿದ ವಕೀಲರು ಮತ್ತು ಹೆಚ್ಚುವರಿ ಅಡ್ವೊಕೇಟ್ ಜನರಲ್ ಪೀಠಕ್ಕೆ ತಿಳಿಸಿದರು. ಕಳೆದ ಬುಧವಾರ ನ್ಯಾಯಾಲಯದಲ್ಲಿ ಈ ವಿಷಯ ವಿಚಾರಣೆಗೆ ಬಂದಾಗ, ಎಸ್ ಓಪಿ ಅನುಸರಿಸದ ಸರ್ಕಾರ ಮತ್ತು ಕೆಪಿಸಿಸಿ ವಿರುದ್ಧ ಚಾಟಿ ಬೀಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
