
ಬೆಂಗಳೂರು: ಕ್ರೀಡಾಳುಗಳಿಗೆ ವೈಜ್ಞಾನಿಕವಾಗಿ ಮಾರ್ಗದರ್ಶನ ನೀಡುವ ಕೆಲಸವನ್ನು ತರಬೇತುಗೊಂಡಿರುವ ಕೋಚ್ ಗಳು ಮಾಡಬೇಕಾದ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟದ ಬ್ಯಾಟನ್ ವಿನಿಮಯ ಕಾರ್ಯಕ್ರಮದಲ್ಲಿ ಶುಕ್ರವಾರ ಆನ್ ಲೈನ್ ಮೂಲಕ ಪಾಲ್ಗೊಂಡು ಅವರು ಮಾತನಾಡಿದರು.
ಅತ್ಯುತ್ತಮ ಕೋಚ್ ಗಳ ಮೂಲಕ ಕ್ರೀಡಾ ಪಟುಗಳಿಗೆ ತರಬೇತಿ ನೀಡುವುದು ಅತ್ಯಗತ್ಯ. ಅವರಿಗೆ ಪಠ್ಯಕ್ರಮ ರೂಪಿಸಿ ಅದರಂತೆ ಸೂಕ್ತ ಮಾರ್ಗದರ್ಶನ ನೀಡುವ ಅವಶ್ಯಕತೆ ಇದೆ ಎಂದು ಅವರು ಅಭಿಪ್ರಾಯಪಟ್ಟರು. ಅಮೃತ ಕ್ರೀಡಾ ಯೋಜನೆಯ ಗುರಿ ಈಡೇರಿಸಲು ಸರ್ಕಾರ ಅಗತ್ಯ ನೆರವು ನೀಡಲು ಬದ್ಧ ಎಂದರು.
72 ದೇಶಗಳ ಒಕ್ಕೂಟ ರಚನೆಯಾಗಿ ಹಲವಾರು ವಿಚಾರಗಳ ವಿನಿಮಯಕ್ಕೆ ಕಾಮನ್ವೆಲ್ತ್ ಒಕ್ಕೂಟ ವೇದಿಕೆಯಾಗಿದೆ. ಸಮಾನ ಚಿಂತನೆ ಇರುವ ರಾಷ್ಟ್ರಗಳ ಬಾಂಧವ್ಯ ಗಟ್ಟಿಗೊಳ್ಳಲು, ಅದರಲ್ಲೂ ಯುವಪೀಳಿಗೆಯಲ್ಲಿ ಬಾಂಧವ್ಯ ಮುಂದುವರೆಯಬೇಕೆಂಬ ಉದ್ದೇಶದಿಂದ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಬ್ಯಾಟನ್ ಸ್ವೀಕಾರ
ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡಾಕೂಟದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುತ್ತಾರೆ. ಕ್ರೀಡಾಕೂಟದ ಬ್ಯಾಟನ್ ಶುಕ್ರವಾರ 9ಸಾವಿರ ಕಿ.ಮೀ ಪಯಣಿಸಿ ಭಾರತಕ್ಕೆ ಆಗಮಿಸಿದೆ. ಭಾರತದ ನಾಲ್ಕು ಮಹಾನಗರಗಳಿಗೆ ಬ್ಯಾಟನ್ ಸ್ವೀಕಾರ ಮಾಡುವ ಅವಕಾಶ ದೊರೆತಿದ್ದು, ಈ ಪೈಕಿ ಬೆಂಗಳೂರು ಕೂಡ ಒಂದು ಎನ್ನುವುದು ಸಂತೋಷದ ಸಂಗತಿ ನಮ್ಮ ಜವಾಬ್ದಾರಿಯನ್ನು ಮುಂದುವರಿಸುವ ಸಂಕೇತವಾಗಿರುವ ಈ ಕಾರ್ಯಕ್ರಮ ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿ, ಕ್ರೀಡಾ ಲೋಕಕ್ಕೆ ಹೊಸ ಚಿಂತನೆ ಹಾಗೂ ಆಯಾಮಗಳನ್ನು ನೀಡಿದ್ದಾರೆ. ಖೇಲೋ ಇಂಡಿಯಾ ಪ್ರಾರಂಭಿಸಿ ಹಳ್ಳಿ ಹಳ್ಳಿಗಳಲ್ಲಿ ವ್ಯವಸ್ಥಿತವಾಗಿ ಕ್ರೀಡಾಕೂಟಗಳು ನಡೆಯುತ್ತಿವೆ. ಜೀತೋ ಇಂಡಿಯಾ ಕಾರ್ಯಕ್ರಮ ಕ್ರೀಡಾಳುಗಳಿಗೆ ಬಹು ದೊಡ್ಡ ಸ್ಫೂರ್ತಿ ನೀಡಿದೆ. ಟೋಕಿಯೋ ಒಲಂಪಿಕ್ಸ್ ನಲ್ಲಿ ಅತಿ ಹೆಚ್ಚು ಪದಕಗಳನ್ನು ಗೆಲ್ಲಲು ಭಾರತಕ್ಕೆ ಸಾಧ್ಯವಾಯಿತು ಎಂದೂ ಸಿಎಂ ಹೇಳಿದರು.
