ಮೇಕೆದಾಟು ಪಾದಯಾತ್ರೆಗೆ ಬ್ರೇಕ್ ಹಾಕಿ ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದ್ದ ಮೇಕೆದಾಟು ಪಾದಯಾತ್ರೆಯನ್ನು ತತ್ತಕ್ಷಣದಿಂದ ಜಾರಿಗೆ ಬರುವಂತೆ ರಾಜ್ಯ ಸರ್ಕಾರ ನಿಷೇಧಿಸಿದೆ. ಈ ಸಂಬಂಧ ರಾಜ್ಯ ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಪಾದಯಾತ್ರೆಯನ್ನು ನಿಲ್ಲಿಸುವಂತೆ ಸೂಚಿಸಲಾಗಿದೆ. ನಮ್ಮ ನೀರು-ನಮ್ಮ ಹಕ್ಕು ಸೇರಿದಂತೆ ಈ ರೀತಿಯ ನಡಿಗೆ ಅಥವಾ ಯಾತ್ರೆಗೆ ವ್ಯಕ್ತಿ ಅಥವಾ ವಾಹನಗಳು ಹೋಗುವಂತಿಲ್ಲ. ಮೆರವಣಿಗೆ ಮಾಡುವಂತಿಲ್ಲ ಎಂದು ಆದೇಶದಲ್ಲಿ ಸೂಚಿಸಲಾಗಿದೆ. ಪಾದಯಾತ್ರೆಗೆ ಅನುಮತಿ ನೀಡಿರುವ ಕುರಿತು ಬುಧವಾರ ಬೆಳಗ್ಗೆ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರದ ವಿರುದ್ಧ ಚಾಟಿ ಬೀಸಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಬೆನ್ನಲ್ಲೇ ಸರ್ಕಾರದಿಂದ ಈ ಆದೇಶ ಹೊರಡಿದೆ. ಕೊರೋನಾ ಹೆಚ್ಚಳದ ನಡುವೆಯೂ ಸರ್ಕಾರಕ್ಕೆ ಸೆಡ್ಡು ಹೊಡೆದು ಕಾಂಗ್ರೆಸ್ ಕಳೆದ ಜ.9ರಿಂದ ಮೇಕೆದಾಟು ಪಾದಯಾತ್ರೆ ಆರಂಭಿಸಿದ್ದರು. ಪಾದಯಾತ್ರೆ ಬುಧವಾರ ರಾಮನಗರ ತಲುಪಿತ್ತು. ಸರ್ಕಾರದ ಆದೇಶದ ಅನ್ವಯ ರಾಮನಗರದ ಒಳಗೆ ಹಾಗೂ ಅಂತರ ಜಿಲ್ಲೆಗೆ ಪಾದಯಾತ್ರೆ ಉದ್ದೇಶದಿಂದ ಸಂಚರಿಸುವಂತಿಲ್ಲ. ಆದರೆ ಸರ್ಕಾರದ ಆದೇಶಕ್ಕೆ ಸೊಪ್ಪು ಹಾಕದಿರಲು ಕಾಂಗ್ರೆಸ್ ತೀರ್ಮಾನಿಸಿದೆ. ಪಾದಯಾತ್ರೆ ಮುನ್ನಡೆಯಲಿದೆ ಎಂದು ಸಂಸದ ಡಿ.ಕೆಎ.ಸುರೇಶ್ ಬುಧವಾರ ರಾತ್ರಿ ತಿಳಿಸಿದ್ದಾರೆ
ಅಧಿಕಾರಿಗಳ ಪೀಕಲಾಟ
ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ಪಾದಯಾತ್ರೆ ತಡೆಯಲು ರಾಮನಗರ ಜಿಲ್ಲಾಡಳಿತ ಸಭೆ ಸೇರಿ ಚರ್ಚೆ ನಡೆಸಿತು. ಈ ನಡುವೆ ಮೇಕೆದಾಟು ಪದಾಯಾತ್ರೆ ನಿಲ್ಲಿಸುವಂತೆ ಮಾಜಿ ಸಿಎಂ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಪಾದಯಾತ್ರೆ ನಿಲ್ಲಿಸಿದರೆ ಕಾಂಗ್ರೆಸ್ಸಿಗೆ ರಾಜಕೀಯ ಲಾಭ ದೊರೆಯಬಹುದು ಎಂಬ ರಾಜಕೀಯ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಜಾಣ ನಡೆ ಪ್ರದರ್ಶಿಸಿದ್ದ ರಾಜ್ಯ ಸರ್ಕಾರ ಪಾದಯಾತ್ರೆಯನ್ನು ನೇರವಾಗಿ ನಿರ್ಬಂಧಿಸಲು ಮೀನಾಮೇಷ ಎಣಿಸಿತ್ತು. ಹೈಕೋರ್ಟ್ ಬೀಸಿದ ಚಾಟಿ ಸರ್ಕಾರಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿತು. ಅಳೆದುತೂಗಿ ಕೊನೆಗೆ ಪಾದಯಾತ್ರೆಗೆ ಬ್ರೇಕ್ ಹಾಕುವ ತೀರ್ಮಾನಕ್ಕೆ ಬರುವುದು ಸರ್ಕಾರಕ್ಕೆ ಅನಿವಾರ್ಯವಾಯಿತು. ಪಾದಯಾತ್ರೆ ಕುರಿತು ಸರ್ಕಾರ ಯಾವೆಲ್ಲಾ ಕ್ರಮಗಳನ್ನು ಕೈಗೊಂಡಿದೆ ಎಂದು ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನಿಸಿತ್ತು. ಅದೇ ರೀತಿ ಸರ್ಕಾರದ ಕೋವಿಡ್ ಮಾರ್ಗಸೂಚಿಯನ್ವಯ ಕೈಗೊಂಡಿರುವ ಕ್ರಮಗಳೇನು ಎಂದು ಕಾಂಗ್ರೆಸ್ ಗೂ ನೋಟಿಸ್ ನೀಡಿ ಉತ್ತರಿಸಲು ಒಂದು ದಿನದ ಗಡುವು ನೀಡಿ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.
