ದ್ವೇಷ ಭಾಷಣ: ದಿಲ್ಲಿ, ಉತ್ತರಾಖಂಡ್ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ಧರ್ಮ ಸಂಸತ್ ಮೂಲಕ ಸಮಾಜದಲ್ಲಿ ಶಾಂತಿ, ಸಾಮರಸ್ಯ ಹಾಳು ಮಾಡುವ ಮತ್ತು ದ್ವೇಷಪೂರಿತ ಭಾಷಣ ಘಟನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಇಂತಹ ಪ್ರಚೋದನಕಾರಿ ಭಾಷಣ ಮಾಡಿ ಶಾಂತಿ-ಸಾಮರಸ್ಯ ಹಾಳು ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಸಲ್ಲಿಸಲಾಗಿದ್ದ ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟು ಈ ಬಗ್ಗೆ ವಿವರಣೆ ನೀಡುವಂತೆ ದೆಹಲಿ ಮತ್ತು ಉತ್ತರಾಖಂಡ್ ಸರ್ಕಾರಗಳಿಗೆ ನೋಟಿಸ್ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಎನ್ .ವಿ .ರಮಣ ನೇತೃತ್ವದ ಪೀಠ ಅರ್ಜಿದಾರರ ಮನವಿಯ ವಿಚಾರಣೆ ನಂತರ ಈ ಕ್ರಮ ಕೈಗೊಂಡಿದೆ.
ದೆಹಲಿ ಮತ್ತು ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್ ಸಭೆಯಲ್ಲಿ ಕೆಲವರು ದ್ವೇಷ ಹರಡುವ ರೀತಿಯಲ್ಲಿ ಭಾಷಣ ಮಾಡಿದ್ದು ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ವಕೀಲ ಅಂಜನ ಪ್ರಕಾಶ್ ಮತ್ತು ಪತ್ರಕರ್ತರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು.
ಧರ್ಮ ಸಂಸತ್ ಸಭೆಯಲ್ಲಿ ಶಾಂತಿ-ಸಾಮರಸ್ಯ ಹಾಳು ಮಾಡುವ ರೀತಿಯಲ್ಲಿ ಭಾಷಣ ಮಾಡಿದ ಕೆಲವು ಸ್ವಾಮಿಜಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಮತ್ತು ಈ ಘಟನೆ ಬಗ್ಗೆ ಕೋರ್ಟ್ ಉಸ್ತುವಾರಿಯಲ್ಲಿ ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುವಂತೆ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದರು.
ಇನ್ನು ಮುಂದೆ ಈ ರೀತಿಯ ಧರ್ಮ ಸಂಸದ್ ಸಭೆ ನಡೆಸದಂತೆ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳಿಗೆ ಅರ್ಜಿದಾರರು ಮನವಿ ಸಲ್ಲಿಸಲು ನ್ಯಾಯಾಲಯ ಅನುಮತಿ ಸಹ ನೀಡಿದೆ.
