ಸಹಕಾರ ಸಾರಿಗೆ ಬಸ್ಗಳ ಪುನಶ್ಚೇತನಕ್ಕೆ ಸ್ಪಂದಿಸದ ಸರ್ಕಾರ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಅನೇಕ ಸಂಕಷ್ಟದ ನಡುವೆ, ಏಳು ಬೀಳುಗಳ ನಡುವೆ ಯಶಸ್ವಿಯಾಗಿ ನಡೆಯುತ್ತಿದ್ದ ಸಹಕಾರ ಸಾರಿಗೆ ಬಸ್ಗಳು ಹಲವು ಕಾರಣಗಳಿಂದ ಸಂಕಷ್ಟಕ್ಕೆ ಗುರಿಯಾಗಿ ಸ್ಥಗಿತಗೊಂಡು ಎರಡು ವರ್ಷಗಳು ಕಳೆದಿವೆ. ನಷ್ಟದಲ್ಲಿರುವ ಸಹಕಾರ ಸಾರಿಗೆ ಸಂಸ್ಥೆಯನ್ನು ಪುನಶ್ಚೇತನಗೊಳಿಸಬೇಕೆಂಬ ಆಗ್ರಹ ವ್ಯಾಪಕವಾಗಿ ಕೇಳಿಬಂದಿದೆ. ಆದರೆ ಸರ್ಕಾರ ಇದಕ್ಕ ಸ್ಪಂದಿಸದೇ ಇರುವುದರಿಂದ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ.
ಸಹಕಾರ ಸಂಸ್ಥೆಯ ಬಸ್ಗಳು ಸಂಚರಿಸುತ್ತಿದ್ದ ಅನೇಕ ರಸ್ತೆಗಳಲ್ಲಿ ಬೇರೆ ಸಂಸ್ಥೆಯ ಬಸ್ಗಳು ಓಡುತ್ತಿವೆ. ಕೆಲವೆಡೆ ಮಾತ್ರ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುತ್ತಿವೆ. ಉಳಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಬಸ್ಗಳಿಲ್ಲದೆ ಸಮಸ್ಯೆ ಎದುರಾಗಿದೆ.
ʼಸಹಕಾರ ಸಾರಿಗೆ ಉಳಿಸುವ ಪ್ರಯತ್ನವಾಗಲಿʼ
ಸಹಕಾರ ತತ್ವದ ಅಡಿ ಆರಂಭವಾದ ಮಲೆನಾಡಿನ ಹೆಮ್ಮೆಯ ಸಂಸ್ಥೆ ಸಹಕಾರ ಸಾರಿಗೆಯನ್ನು ಉಳಿಸಬೇಕಿದ್ದು ಈ ಬಗ್ಗೆ ಸರ್ಕಾರ ಗಂಭೀರ ಪ್ರಯತ್ನ ನಡೆಸಬೇಕು ಎಂದು ಶಾಸಕ ಟಿ ಡಿ ರಾಜೇಗೌಡ ಆಗ್ರಹಿಸಿದ್ದಾರೆ.
ಪುನಶ್ಚೇತನಕ್ಕೆ 5 ಕೋಟಿ ನೆರವು ನೀಡುವಂತೆ ರಾಜ್ಯ ಸರ್ಕಾರವನ್ನು ಸಂಸ್ಥೆ ಮನವಿ ಮಾಡಿತ್ತು. ಆದರೆ ಸ್ಪಂದಿಸದೆ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ನಷ್ಟದಲ್ಲಿರುವ ಸಂಸ್ಥೆಯನ್ನು ಸರ್ಕಾರಕ್ಕೆ ವಹಿಸಿಕೊಡಲು ಆಡಳಿತ ಸಂಸ್ಥೆ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಪ್ರಯತ್ನಿಸಬೇಕು. ಜೊತೆಗೆ ಹೊಸ ಆಡಳಿತ ಮಂಡಳಿಯನ್ನು ರಚಿಸಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಪಡಬೇಕು ಎಂದು ಒತ್ತಾಯಿಸಿದ್ದಾರೆ.
ಸಹಕಾರ ಸಾರಿಗೆ ಪರ್ಮಿಟನ್ನು ರದ್ದುಪಡಿಸಿ ತಮಗೆ ನೀಡುವಂತೆ ಮತ್ತು ಸಂಘ ಮಾಡಿರುವ ಮನವಿಯತ್ತ ಗಮನ ಸೆಳೆದಾಗ ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು.
ಮಜ್ದೂರ್ ಸಂಘಕ್ಕೆ ಪರವಾನಗಿ ನೀಡಲು ಆಗ್ರಹ:
ಸಹಕಾರ ಸಾರಿಗೆ ಸಂಸ್ಥೆಯ ಹೆಸರಲ್ಲಿರುವ ಪರವಾನಗಿಯನ್ನು ರದ್ದುಪಡಿಸಿ ಜಿಲ್ಲಾ ಟ್ರಾನ್ಸ್ಫೋರ್ಟ್ ಮತ್ತು ಜನರಲ್ ಮಜ್ದೂರ್ ಸಂಘಕ್ಕೆ ನೀಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗಳಿಗೆ ಸಂಘದಿಂದ ಮನವಿ ಸಲ್ಲಿಸಿದ್ದಾರೆ.
ಕೊಪ್ಪದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಕಾರ ಸಾರಿಗೆ ಸಂಸ್ಥೆ ಸ್ಥಗಿತಗೊಂಡು ಎರಡು ವರ್ಷಗಳೇ ಕಳೆದಿವೆ. ಕಾರ್ಮಿಕರು ಬೀದಿಪಾಲಾಗುತ್ತಿದ್ದಾರೆ. ಸರ್ಕಾರ ಕೂಡಲೇ ನೆರವಿಗೆ ಧಾವಿಸಿ, ಕಾರ್ಮಿಕರ ಸಮಸ್ಯೆ ಬಗೆಹರಿಸಬೇಕು ಹಾಗೂ ಆಡಳಿತ ಮಂಡಳಿಯನ್ನು ಪುನರ್ ರಚನೆ ಮಾಡಬೇಕು, ತೆರಿಗೆ ಸಂಪೂರ್ಣ ಮನ್ನಾ ಸಂಸ್ಥೆಯ ಚರ ಮತ್ತು ಸ್ತಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು 12 ಕೋಟಿ ರೂ ಸಾಲ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಒಂದು ವರ್ಷದ ಹಿಂದೆಯೇ ಆಡಳಿತ ಮಂಡಳಿ ಯಾವ ಬಸ್ಗಳಿಗೂ ತೆರಿಗೆ ಸರ್ಕಾರಕ್ಕೆ ಪಾವತಿಸಿಲ್ಲ. ಮಾರ್ಗ ಪರವಾನಗಿಗಳ ನವೀಕರಣ ಮಾಡಿಸಿಲ್ಲ. ನೌಕರರ ಭವಿಷ್ಯನಿಧಿ ಹಣವನ್ನು ಇಲಾಖೆಗೆ ಪಾವತಿಸಿಲ್ಲ. ಎರಡು ವರ್ಷಗಳಿಂದ ಆದಾಯ ಎಲ್ಲಿ ಹೋಯಿತು ಎಂದು ಪ್ರಶ್ನಿಸಿದ್ದಾರೆ.
ಆಡಳಿತ ಮಂಡಳಿ ಹಣ ದುರುಪಯೋಗ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ, ಸಹಕಾರ ಕಾಯ್ದೆ 68ರ ಅನ್ವಯ ತನಿಖೆಗೆ ಆದೇಶವಾಗಿದ್ದರೂ ಫೈನಾನ್ಸ್ ಕಂಪನಿಯೊಂದು ಆಡಳಿತ ಕಚೇರಿಯನ್ನು ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಮುಟ್ಟುಗೋಲು ಹಾಕಿಕೊಂಡಿರುವುದರಿಂದ ತನಿಖೆಗೆ ಅಡಚಣೆಯಾಗಿದೆ. ಸಂಸ್ಥೆಯಲ್ಲಿ ಕಾರ್ಯಚಟುವಟಿಕೆ ನಡೆಸಲು ಆಡಳಿತ ಮಂಡಳಿ ಅವಶ್ಯಕತೆಯಿದ್ದು, ವಿಶೇಷ ಅಧಿಕಾರಿಯನ್ನು ನೇಮಿಸಿ ಚುನಾವಣೆ ನಡೆಸಲು ಆದೇಶಿಸಬೇಕು ಎಂದು ಒತ್ತಾಯಿಸಿದ್ದಾರೆ.



