ಪ್ರಾಂಶುಪಾಲರು ಸೇರಿ 32 ಶಾಲಾ ಮಕ್ಕಳಿಗೆ ಕೋವಿಡ್ ಸೋಂಕು

ದಾವಣಗೆರೆ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಜಾಸ್ತಿಯಾಗುತ್ತಿದೆ. ಚನ್ನಗಿರಿ ತಾಲೂಕಿನ ಮಾವಿನಹೊಳೆ ಸರ್ಕಾರಿ ವಸತಿ ಶಾಲೆಯಲ್ಲಿ ಕೊರೊನಾ ಸ್ಪೋಟವಾಗಿದ್ದು, ಶಾಲೆಯ ಪ್ರಾಂಶುಪಾಲರೂ ಸೇರಿದಂತೆ 32 ಮಕ್ಕಳಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಎಲ್ಲರೂ ಆರನೇ ತರಗತಿಯಿಂದ ಹತ್ತನೇ ತರಗತಿ ಓದುತ್ತಿರುವ ಮಕ್ಕಳು. ಚನ್ನಗಿರಿ ತಾಲೂಕಿನ ಮಾವಿನಹೊಳೆಯಲ್ಲಿರುವ ಇಂದಿರಾ ಗಾಂಧಿ ವಸತಿ ಶಾಲೆಯ ಮಕ್ಕಳಿಗೆ ಕೊರೊನಾ ತಗುಲಿದ್ದು, ಎಲ್ಲರನ್ನೂ ಐಸೋಲೇಷನ್ ಮಾಡಲಾಗಿದೆ.
ಕೆಮ್ಮು, ಜ್ಚರ, ಶೀತದಿಂದ ಬಳಲುತಿದ್ದ ಮಕ್ಕಳಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ಈ ವೇಳೆ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿನ ಲಕ್ಷಣ ಇರುವ ಎಲ್ಲಾ ಮಕ್ಕಳಿಗೆ ಚನ್ನಗಿರಿ ತಾಲೂಕಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಉಳಿದವರಿಗೆ ಶಾಲೆಯಲ್ಲಿ ಇರಿಸಿರುವ ತಾಲೂಕು ಆಡಳಿತ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಿದೆ. ಉಳಿದ ಮಕ್ಕಳ ಕೋವಿಡ್ ಟೆಸ್ಟ್ ಮುಂದುವರಿಸಿರುವ ವೈದ್ಯರ ತಂಡ ಎಲ್ಲರನ್ನೂ ಟೆಸ್ಟ್ ಗೆ ಒಳಪಡಿಸಿದ್ದಾರೆ. ಸುದ್ದಿ ತಿಳಿದ ತಕ್ಷಣ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದಾರೆ.
