ನಾನು ತಪ್ಪು ಮಾಡಿದ್ದೇನೆ, ಬಹಿರಂಗವಾಗಿ ರಾಜ್ಯದ ಜನರ ಕ್ಷಮೆಯಾಚಿಸುತ್ತೇನೆ: ಶಾಸಕ ಎಂಪಿ ರೇಣುಕಾಚಾರ್ಯ

ದಾವಣಗೆರೆ: ನಾಡಿನ ಸಮಸ್ತ ಜನತೆ ಮತ್ತು ಮಾಧ್ಯಮದವರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ. ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದ್ದೇನೆ. ನಾನು ಈ ರೀತಿ ನಡೆದುಕೊಳ್ಳಬಾರದಿತ್ತು. ನನ್ನನ್ನು ಕ್ಷಮಿಸಿ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿ ತಾಲೂಕಿನ ಬಲಗುರಿ ಗ್ರಾಮದ ದುರ್ಗಾಂಬಿಕೆ ದೇವಿ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಮಾತ್ರವಲ್ಲ, ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದರು. ಸಾವಿರಾರು ಯುವಕರು ರೇಣುಕಾಚಾರ್ಯ ಅವರನ್ನು ಹೊತ್ತು ಮೆರವಣಿಗೆ ನಡೆಸಿದ್ದರು. ಇದು ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು.
ಬಳಿಕ ಎಚ್ಚೆತ್ತುಕೊಂಡಿರುವ ರೇಣುಕಾಚಾರ್ಯ, ಹೊನ್ನಾಳಿ ತಾಲೂಕಿನ ಬಲಗುರಿ ಗ್ರಾಮದಲ್ಲಿ ಹೋರಿ ಬೆದರಿಸುವ ದೊಡ್ಡ ಕಾರ್ಯಕ್ರಮವನ್ನು ಯುವಕರು ಸಂಘಟಿಸಿದ್ದರು. ಕಳೆದ 15 ದಿನಗಳ ಹಿಂದೆ ಕಾರ್ಯಕ್ರಮ ನಿಗದಿಯಾಗಿತ್ತು. ಆಗ ಕೋವಿಡ್ ಕಡಿಮೆ ಇತ್ತು. ಕಳೆದ ಶುಕ್ರವಾರ ಮುಂದೂಡುವಂತೆ ಹೇಳಿದ್ದೆ. ಶನಿವಾರ ನೂರಾರು ಯುವಕರು ಮನೆಗೆ ಬಂದ್ರು. ಕಾರ್ಯಕ್ರಮ ಮುಂದೂಡಿದರೆ ಬಹಳ ಖರ್ಚಾಗಿದೆ. ತುಂಬಾ ಸಮಸ್ಯೆ ಆಗುತ್ತದೆ. ಈಗಾಗಲೇ ಒಂದು ಲಕ್ಷ ರೂಪಾಯಿ ಖರ್ಚಾಗಿದೆ. ನೀವು ಉದ್ಘಾಟನೆ ಮಾಡಲು ಬರಬೇಕು. ರದ್ದು ಮಾಡಲು ಆಗಲ್ಲ ಎಂದಿದ್ದರು. ಯುವಕರ ಒತ್ತಾಯ ಮತ್ತು ಅಪೇಕ್ಷೆ ಮೇರೆಗೆ ಪಾಲ್ಗೊಂಡಿದ್ದೆ ಎಂದು ಸಮರ್ಥನೆ ನೀಡುವ ಪ್ರಯತ್ನ ಮಾಡಿದರು.
ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಸಹಸ್ರಾರು ಜನರು ಸೇರುತ್ತಾರೆ. ಕಾರ್ಯಕ್ರಮ ಉದ್ಘಾಟನೆಗೆ ಬಂದರೆ ರೇಣುಕಾಚಾರ್ಯ ಸರ್ಕಾರದ ಪಾಲುದಾರರಾಗಿ ಕೋವಿಡ್ ನಿಯಮಾವಳಿ ಉಲ್ಲಂಘನೆ ಮಾಡಿದರು ಎಂಬ ಸಂದೇಶ ರವಾನೆಯಾಗುತ್ತದೆ ಎಂದರೂ ಯುವಕರು ಕೇಳಲಿಲ್ಲ. ಈ ಕಾರ್ಯಕ್ರಮ ನಡೆಯಬೇಕು. ನೀವು ಬರಬೇಕು ಎಂದಿದ್ದಕ್ಕೆ ಹೋಗಿದ್ದೆ ಎಂದು ತಿಳಿಸಿದರು.
ಮೊದಲ ಹಾಗೂ ಎರಡನೇ ಅಲೆ ಬಂದಾಗ ನಾಡಿನ ಜನರು, ಅನೇಕ ಸಂಘಟನೆಯವರು, ಪಕ್ಷದವರು, ದೇಶ, ವಿದೇಶಗಳಿಂದ ಕರೆ ಮಾಡಿ ಕೋವಿಡ್ ವೇಳೆ ನಾನು ಜನರ ಜೊತೆಗಿದ್ದು ಮಾಡಿದ್ದ ಕೆಲಸಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಯೋಗಾಸನ, ಕೋವಿಡ್ ಕೇರ್ ಸೆಂಟರ್ ನಲ್ಲಿ ವಾಸ್ತವ್ಯ, ಮನರಂಜನೆ ಕಾರ್ಯಕ್ರಮ ನಡೆಸುವ ಮೂಲಕ ಕೋವಿಡ್ ಸೋಂಕಿತರಲ್ಲಿ ಧೈರ್ಯ ತುಂಬುವ ಕೆಲಸ ಮಾಡಿದ್ದೆ. ಎಲ್ಲರೂ ಹೊಗಳಿದ್ದರು. ಅನಿವಾರ್ಯವಾಗಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದೆ. ಇದು ಈಗ ಮುಜುಗರಕ್ಕೂ ಕಾರಣವಾಗಿದೆ ಎಂದರು.
ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ನವರು ನಡೆಸುತ್ತಿರುವ ಪಾದಯಾತ್ರೆ ಬಗ್ಗೆ ಟೀಕೆ ಮಾಡಲು ಹೋಗಲ್ಲ. ದಿನೇ ದಿನೇ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ಕಾಂಗ್ರೆಸ್ ನವರು ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಈ ಹಿಂದೆ ಕಾಂಗ್ರೆಸ್ ಪಾದಯಾತ್ರೆ ಬಗ್ಗೆ ಟೀಕಿಸಿದ್ದೆ. ಆದ್ರೆ, ಈಗ ಟೀಕೆ ಮಾಡುವ ನೈತಿಕತೆ ಮತ್ತು ಶಕ್ತಿ ಕಳೆದುಕೊಂಡಿದ್ದೇನೆ. ಈ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿದ್ದವನು ನಾನು. ಕುರಿ ಕಾಳಗ ಇದ್ದು, ಮುಂದುವರಿಸಬೇಕು. ಕೋವಿಡ್ ನಿಯಮಾವಳಿ ಪಾಲಿಸಿ. ಹೆಚ್ಚಿನ ಜನರು ಸೇರಬೇಡಿ. ಮಾಸ್ಕ್ ಧರಿಸಿ, ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಆದೇಶಿಸಿರುವ ಕೋವಿಡ್ ನಿಯಮಾವಳಿಗಳನ್ನು ಪಾಲಿಸಿ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಕೋವಿಡ್ ವಿರುದ್ಧದ ಹೋರಾಟದಲ್ಲಿ ಪಾಲ್ಗೊಳ್ಳೋಣ ಎಂದು ರೇಣುಕಾಚಾರ್ಯ ಮನವಿ ಮಾಡಿದರು.
ಮಾತು ಸಾಧನೆ ಅಲ್ಲ, ಸಾಧನೆ ಮಾತಾಡುತ್ತೆ. ಕೋವಿಡ್ ಸಂಕಷ್ಟದ ವೇಳೆ ನಾನು ಮಾಡಿದ್ದ ಎಲ್ಲಾ ಕೆಲಸಗಳಿಗೂ ಮೆಚ್ಚುಗೆ ವ್ಯಕ್ತವಾಗಿದೆ. ಬಲಗುರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಖಳನಾಯಕನ ರೀತಿ ತೋರಿಸಲಾಗುತ್ತಿದೆ. ನನ್ನದು ತಪ್ಪಿದೆ, ಕ್ಷಮಿಸಿ ಎಂದು ವಿನಂತಿ ಮಾಡುತ್ತೇನೆ. ಸಿಎಂ ಬಸವರಾಜ್ ಬೊಮ್ಮಾಯಿ ಅವರೂ ಸಹ ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದ್ದಾರೆ. ಅದೇ ರೀತಿಯಲ್ಲಿ ಇಡೀ ಸರ್ಕಾರವೇ ಈ ಬಗ್ಗೆ ಕ್ರಮ ಕೈಗೊಳ್ಳುತ್ತಿದೆ. ಇನ್ನು ಮುಂದೆ ಈ ರೀತಿಯಾಗದಂತೆ ಎಚ್ಚರ ವಹಿಸೋಣ ಎಂದು ಹೇಳಿದರು.




