ಕಾಂಗ್ರೆಸ್ ಪಾದಯಾತ್ರೆ ರಾಜಕೀಯ ಗಿಮಿಕ್: ಸಂಸದ ಜಿ ಎಂ ಸಿದ್ದೇಶ್ವರ್ ಕಿಡಿ

ದಾವಣಗೆರೆ: ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ನಡೆಸುತ್ತಿರುವ ಪಾದಯಾತ್ರೆ ರಾಜಕೀಯ ಗಿಮಿಕ್ ಎಂದು ಸಂಸದ ಜಿ. ಎಂ. ಸಿದ್ದೇಶ್ವರ್ ಆರೋಪಿಸಿದ್ದಾರೆ. ನಗರದ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಾದಯಾತ್ರೆಯಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಮೇಕೆದಾಟು ಯೋಜನೆಗೆ ಸಂಬಂಧಪಟ್ಟಂತೆ ನಮ್ಮಸರ್ಕಾರವೇ ಎಲ್ಲಾ ತೊಡಕುಗಳನ್ನು ನಿವಾರಿಸಿದೆ. ಅಣೆಕಟ್ಟು ಕಟ್ಟಲು ಆರಂಭಿಸಿದ ವೇಳೆ ತಮಿಳುನಾಡು ನ್ಯಾಯಾಲಯದ ಮೊರೆ ಹೋಗಿದೆ. ಆದಕಾರಣ ಕಾಮಗಾರಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ತಮಿಳುನಾಡಿನಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದ ಪಕ್ಷವೇ ಅಧಿಕಾರದಲ್ಲಿದೆ. ಅವರಲ್ಲಿ ಮನವಿ ಮಾಡಿ ಕೋರ್ಟ್ ನಲ್ಲಿ ಇರುವ ಪ್ರಕರಣ ವಾಪಾಸ್ ತೆಗೆದುಕೊಳ್ಳವಂತೆ ಕಾಂಗ್ರೆಸ್ಸಿಗರೇ ಹೇಳಬೇಕು. ಅವರು ಪ್ರಕರಣ ಹಿಂಪಡೆದರೆ ತಕ್ಷಣವೇ ನಾವು ಕಾಮಗಾರಿ ಆರಂಭಿಸುತ್ತೇವೆ. ಇದರಲ್ಲಿ ಯಾಕೆ ರಾಜಕೀಯ ಮಾಡುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯದ ಜನ ಎಚ್ಚೆತ್ತುಕೊಂಡಿದ್ದಾರೆ. ದೇಶಕ್ಕೆ, ರಾಜ್ಯಕ್ಕೆ ಬಿಜೆಪಿ ಬೇಕಾಗಿದೆ. ಪ್ರಧಾನಮಂತ್ರಿನರೇಂದ್ರಮೋದಿಯವರೇ ಬೇಕಾಗಿದೆ. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಬೇಕೆಂದು ತೀರ್ಮಾನ ಮಾಡಿದ್ದಾರೆ. ಕಾರಣ ನಿಮ್ಮ ಪಾದಯಾತ್ರೆಯು ಯಾವುದೇ ಉಪಯೋಗಕ್ಕೆ ಬರಲ್ಲ. ಅಲ್ಲದೇ ನೀವುಗಳು ಕೋವಿಡ್ ನಿಯಮ ಉಲ್ಲಂಘನೆ ಮಾಡಿ ಪಾದಯಾತ್ರೆ ಮಾಡುತ್ತಿರುವುದು ಶೋಭೆ ತರಲ್ಲ. ಈ ಬಗ್ಗೆ ಸರ್ಕಾರದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿ ತಪ್ಪಿಸುತ್ತಿದ್ದಾರೆ. ಅಲ್ಲದೇ ಕೊರೋನಾ ಹೆಚ್ಚಾಗುತ್ತಿದ್ದರೂ ನಿಯಮಗಳನ್ನು ಮೀರಿ ಪಾದಯಾತ್ರೆ ಮಾಡುವುದು ಸರಿಯಲ್ಲ. ಜಿಲ್ಲಾ ಆಸ್ಪತ್ರೆಯ ಅಧೀಕ್ಷಕರು, ಜಿಲ್ಲಾಡಳಿತ ನೀಡಿದ ಮಾಹಿತಿಯನ್ನೇ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಆರೀತಿಯಾದರೆ ಎಲ್ಲಿಂದ ತಪ್ಪು ಮಾಹಿತಿ ಬರುತ್ತದೆ ಎಂದರು.
ದೇಶದಲ್ಲೇ ಕೋವಿಡ್ ಹೆಚ್ಚಾಗಿದೆ. ಇಡೀ ವಿಶ್ವದಲ್ಲೇ ಕೋವಿಡ್ ಇದೆ. ವರದಿಗಳೇ ಹೇಳುವಾಗ ನಾವುಗಳು ತಪ್ಪು ಮಾಹಿತಿ ಕೊಡುವ ಸಂದರ್ಭ ಬರುವುದೇ ಇಲ್ಲ. ಇದೇಲ್ಲಾ ಕಾಂಗ್ರೆಸ್ಸಿಗರ ತಪ್ಪು ಕಲ್ಪನೆ ಎಂದು ಅಭಿಪ್ರಾಯಪಟ್ಟರು.



