ಪಿಎಂ ಭದ್ರತಾ ಲೋಪ : ತನಿಖಾ ಸಮಿತಿ ನೇಮಕಕ್ಕೆ ಸುಪ್ರೀಂ ಕೋರ್ಟ್ ಅಸ್ತು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಉಂಟಾಗಿದ್ದ ಲೋಪದ ಬಗ್ಗೆ ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖಾ ಸಮಿತಿ ನೇಮಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಮೂರ್ತಿಗಳ ಅಧ್ಯಕ್ಷತೆಯಲ್ಲಿ ತನಿಖಾ ಸಮಿತಿ ರಚಿಸುವುದಾಗಿ ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.
ಭದ್ರತಾ ಲೋಪದ ಬಗ್ಗೆ ವಿಚಾರಣೆ ನಡೆಸುವಂತೆ ವಕೀಲರೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ನೇತೃತ್ವದ ಪೀಠ ಇಂದಿನ ವಿಚಾರಣೆ ಸಂದರ್ಭದಲ್ಲಿ ನಿವೃತ್ತ ನ್ಯಾಯಾಧೀಶರ ಸಮ್ಮುಖದಲ್ಲಿ ಘಟನಾ ತನಿಖೆಗಾಗಿ ಸಮಿತಿ ನೇಮಿಸಲು ಸಮ್ಮತಿಸಿದೆ.
ಪಂಜಾಬಿನಲ್ಲಿ ಪೊಲೀಸರು ಮಾಡಿಕೊಂಡಿದ್ದ ಭದ್ರತಾ ವ್ಯವಸ್ಥೆಗಳ ಎಲ್ಲ ದಾಖಲೆಗಳನ್ನು ಜೋಪಾನವಾಗಿ ಸಂರಕ್ಷಿಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ನ್ಯಾಯಾಲಯ ಸೂಚಿಸಿದೆ.
ಪಂಜಾಬಿನ ಫಿರೋಜ್ ಪುರಕ್ಕೆ ಹೋಗುವ ಸಮಯದಲ್ಲಿ ಪ್ರಧಾನಿಯವರ ಬೆಂಗಾವಲು ವಾಹನ ಬೇರೆ ಮೇಲು ಸೇತುವೆ ಬಳಿ ಸಿಕ್ಕಿಕೊಂಡು, ಸ್ವತಃ ಪ್ರಧಾನಿ 20ನಿಮಿಷ ಹೆದ್ದಾರಿಯಲ್ಲಿ ಕಳೆದು ನಿಗದಿತ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯಾವಾಗದೆ ದೆಹಲಿಗೆ ಹಿಂತಿರುಗಿದ್ದರು.
