ಮೇಕೆದಾಟು ಯೋಜನೆ ಲಾಭ ಪಡೆಯಲು ಬಿಜೆಪಿ, ಜೆಡಿಎಸ್ ಯತ್ನ: ಮಲ್ಲಿಕಾರ್ಜುನ ಖರ್ಗೆ

ರಾಮನಗರ: ಮೇಕೆದಾಟು ಯೋಜನೆ ಸಂಬಂಧ ಕಾಂಗ್ರೆಸ್ ಹಮ್ಮಿಕೊಂಡಿರುವ ಹೋರಾಟದ ಗುಮ್ಮ ಬಿಜೆಪಿ ಮತ್ತು ಜೆಡಿಎಸ್ ನ್ನು ಕಾಡುತ್ತಿದೆ ಎಂದು ರಾಜ್ಯ ಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಕನಕಪುರದ ಸಂಗಮದಲ್ಲಿ ಮೇಕೆದಾಟು ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೆಡಿಟ್ ಪಡೆದುಕೊಳ್ಳುತ್ತಾರೆಂಬ ಕಾರಣಕ್ಕೆ ಬಿಜೆಪಿ ಸರ್ಕಾರ ಜೆಡಿಎಸ್ ಮಾತ್ರವಲ್ಲ ಬೇರೆಯವರೂ ಪ್ರಯತ್ನಿಸುತ್ತಿದ್ದಾರೆ ಎಂದರು.
ಹೋರಾಟ ವಿಫಲಗೊಳಿಸಲು ಸರ್ಕಾರ ಯತ್ನಿಸುತ್ತಿದೆ. ಆದರೆ, ಯೋಜನೆ ಕಾರ್ಯಸಾಧ್ಯ ಆಗುವವರೆಗೂ ಹೋರಾಟ ಛಲ ಇರಬೇಕು. ಪಕ್ಷದ ನಾಯಕರು ಕಾರ್ಯಕರ್ತರಿಗೆ ಛಲ ಇದೆ. ನಡಿಗೆಯಲ್ಲಿ ಆರೋಗ್ಯ ಚೆನ್ನಾಗಿರಲಿ ಎಂದು ಹೇಳಿದ ಖರ್ಗೆ, ಕೋವಿಡ್ ನಿಯಮಗಳ ಪಾಲನೆ ಮಾಡಬೇಕು. ಟೀಕೆಗೆ ಗುರಿ ಆಗಬಾರದು ಎಂದರು.
ಯೋಜನೆಯಿಂದ ತಮಿಳು ನಾಡಿನ ತೊಂದರೆ ಆಗಲ್ಲ. ಮುಳುಗಡೆ ಪ್ರದೇಶ ಕಡಿಮೆ ಇದೆ. ಸರ್ಕಾರ ಈಗಾಗಲೇ ಅವರಿಗೆ ಎರಡುಪಟ್ಟು ಜಮೀನು ನೀಡಿದೆ ಎಂದರು. ಬೆಂಗಳೂರು ಮಹಾನಗರ ಸೇರಿದಂತೆ ಗ್ರಾಮಗಳಿಗೆ ಕುಡಿಯುವ ನೀರು, ವಿದ್ಯುತ್ ಉತ್ಪಾದನೆ ಮಾಡು ಯೋಜನೆ ಇದಾಗಿದ್ದು, ಈಗ ಇದರ ವೆಚ್ಚ 9 ಸಾವಿರ ಕೋಟಿ ರೂಪಾಯಿ ದಾಟಿದೆ ಎಂದರು. ನೀರಿಗಾಗಿ ಜಗಳ ಆಡುತ್ತಿದ್ದೇವೆ. ಯೋಜನೆ ಅನುಷ್ಠಾನದಿಂದ 66 ಟಿಎಂಸಿ ಜಲ ಸಂಗ್ರಹ ಆಗುತ್ತದೆ ಎಂದು ತಿಳಿಸಿದರು.
ಮೇಕೆದಾಟು ಯೋಜನೆ ಕಾಂಗ್ರೆಸ್ ಪಕ್ಷದ ಪ್ರಯತ್ನದ ಫಲ. ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಲಸಂಪನ್ಮೂಲ ಸಚಿವರಾಗಿದ್ದಾಗ ಯೋಜನೆಗೆ ಸ್ವರೂಪ ನೀಡಿ ಅದರ ಕಾರ್ಯಗತಕ್ಕೆ ಪ್ರಯತ್ನಿಸಿದ್ದನ್ನು ಮರೆಯುವಂತಿಲ್ಲ ಎಂದೂ ಖರ್ಗೆ ಹೇಳಿದರು.
