ಭದ್ರತಾ ಲೋಪ, 150 ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲು

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಪಂಜಾಬ್ ರಾಜ್ಯಕ್ಕೆ ಭೇಟಿ ನೀಡಿದ್ದ ಸಮಯದಲ್ಲಿ ಉಂಟಾಗಿದ್ದ ಭದ್ರತಾ ಲೋಪಕ್ಕೆ ಸಂಬಂಧಪಟ್ಟಂತೆ ಫಿರೋಜ್ ಪುರ ಪೊಲೀಸರು 150 ಅಪರಿಚಿತರ ವಿರುದ್ಧ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಕುಲ್ ಕರ್ಕಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಐಪಿಸಿ 283 ರ ಪ್ರಕಾರ ಪ್ರಕರಣ ದಾಖಲಾಗಿದೆ.
ಹುಸೈನಿವಾಲ ಸ್ಮಾರಕಕ್ಕೆ ಭೇಟಿ ನೀಡಲು ಪ್ರಧಾನಿ ಹೋಗುತ್ತಿದ್ದಾಗ ಮೇಲು ಸೇತುವೆಯಲ್ಲಿ ರೈತರ ಪ್ರತಿಭಟನೆಯಿಂದಾಗಿ ಪ್ರಧಾನಿಯವರ ಬೆಂಗಾವಲು ವಾಹನ 15 ರಿಂದ 20 ನಿಮಿಷ ಹೆದ್ದಾರಿಯಲ್ಲೇ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಪಂಜಾಬ್ ಸರ್ಕಾರದ ಭದ್ರತಾ ಲೋಪವೇ ಕಾರಣ ಎಂದು ದೂರಲಾಗಿತ್ತು.
ಈಗಾಗಲೇ ಕೇಂದ್ರದ ನಿರ್ದೇಶನದ ಮೇರೆಗೆ ಪಂಜಾಬ್ ಸರ್ಕಾರದ ಮುಖ್ಯ ಕಾರ್ಯದರ್ಶಿಯವರು ಘಟನೆ ಕುರಿತಂತೆ ವಿವರ ವರದಿಯನ್ನು ಕೇಂದ್ರಕ್ಕೆ ಕಳಿಸಿದ್ದಾರೆ. ಮುಂದಿನ ಆದೇಶದವರೆಗೆ ರಾಜ್ಯ ಮತ್ತು ಕೇಂದ್ರ ತನಿಖೆ ಕೈಗೆತ್ತಿಕೊಳ್ಳದಂತೆ ಸುಪ್ರೀಂಕೋರ್ಟ್ ನಿರ್ಬಂಧ ಹಾಕಿದ್ದು ಸೋಮವಾರ ಮತ್ತೆ ವಿಚಾರಣೆ ಆರಂಭಿಸುವುದಾಗಿ ಹೇಳಿದೆ.
