
ಬೆಂಗಳೂರು: ಕಾಂಗ್ರೆಸ್ ಪಕ್ಷದ ಉದ್ದೇಶಿತ ಮೇಕೆದಾಟು ಪಾದಯಾತ್ರೆಯಿಂದ ಭಾರಿ ಗಂಡಾಂತರ ಕಾದಿದೆ ಎಂದು ಸರ್ಕಾರ ಭಾವಿಸಿಲ್ಲ. ಪಾದಯಾತ್ರೆ ತಡೆಯುವ ಉದ್ದೇಶದಿಂದ ಕಠಿಣ ಕೋವಿಡ್ ನಿಯಮ ಜಾರಿಗೊಳಿಸಿಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.
ಸಂಪುಟ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಚ್ಚುತ್ತಿರುವ ಕೋವಿಡ್ ಪಾಸಿಟಿವಿಟಿ ದರ ಕಡಿಮೆ ಮಾಡಬೇಕು, ಹೆಚ್ಚಾಗುವ ಸಾಧ್ಯತೆಗೆ ಆರಂಭದಲ್ಲೇ ಕಡಿವಾಣ ಹಾಕಬೇಕು ಎಂಬುದು ಸರ್ಕಾರ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್ ಪಕ್ಷಕ್ಕೆ ಪ್ರತಿಭಟಿಸುವ ಎಲ್ಲಾ ಹಕ್ಕು ಇದೆ, ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಪಾದಯಾತ್ರೆ ಮಾಡೇ ಮಾಡುತ್ತೇವೆ ಎಂದರೆ ಆ ಕುರಿತು ಸರ್ಕಾರ ಏನು ಕ್ರಮ ಕೈಗೊಳ್ಳಬಹುದು ಎಂಬುದರ ಕುರಿತು ಮುಂದೆ ನೋಡುತ್ತೇವೆ ಎಂದರು.
ಕೋವಿಡ್ ಪಾಸಿಟಿವಿಟಿ ದರ ಎರಡು ಮತ್ತು ಮೂರು ಪಟ್ಟು ಹೆಚ್ಚಿದೆ. ಒಮಿಕ್ರಾನ್ ಕ್ಷಿಪ್ರಗತಿಯಲ್ಲಿ ಹರಡುವ ಭಾವನೆ ಇದೆ. ಆರಂಭಿಕ ಹಂತದಲ್ಲಿ ಅದಕ್ಕೆ ಕಡಿವಾಣ ಹಾಕಬೇಕು ಎಂಬ ಉದ್ದೇಶ ಸರ್ಕಾರದ್ದೇ ಹೊರತು ಕಾಂಗ್ರೆಸ್ ಪಾದಯಾತ್ರೆಗೂ ಸರ್ಕಾರದ ನಿರ್ಧಾರಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದರು.
ಕಠಿಣ ನಿಮಯ ಸಡಿಲಿಕೆ
ಬರುವ ಜ.19ರವರೆಗೆ ಕೋವಿಡ್ ಕಠಿಣ ನಿಯಮಗಳನ್ನು ಜಾರಿಗೊಳಿಸಲಾಗಿದೆ. ಬರುವ ಜ.14 ಅಥವಾ 15 ರಂದು ಕೋವಿಡ್ ಸ್ಥಿತಿಗತಿ ಕುರಿತು ಉನ್ನತಮಟ್ಟದ ಸಭೆ ಸೇರಿ ಸಡಿಲಿಸುವ ಚಿಂತನೆ ಸರ್ಕಾರದ ಮುಂದಿದೆ ಎಂದರು.
ಇಂದು ನಡೆದ ಸಂಪುಟ ಸಭೆಯಲ್ಲಿ ಕೆಲವು ಸಚಿವರು ಎಲ್ಲಾ ಕಡೆ ಕೋವಿಡ್ ಕಠಿಣ ನಿಯಮ ಬೇಡ. ಯಾವ ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಹೆಚ್ಚಿದೆ ಅಲ್ಲಿ ಕಠಿಣ ನಿಯಮವಿರಲಿ ಎಂದು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರ ತನ್ನ ತೀರ್ಮಾನವನ್ನು ಪುನರ್ ಪರಿಶೀಲಿಸುತ್ತದೆ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.
ಚುನಾವಣೆಗೆ ಸದಾ ಸಿದ್ದ
ಬಿಬಿಎಂಪಿ ಸೇರಿದಂತೆ ಎಲ್ಲಾ ಚುನಾವಣೆಗಳಿಗೂ ಸರ್ಕಾರ ಸದಾ ಸಿದ್ದವಿದೆ. ಪಕ್ಷ ಎಂದ ಮೇಲೆ ಚುನಾವಣೆ ಎದುರಿಸಬೇಕಲ್ಲವೇ ಎಂದರು.
