ಹಣ, ದರ್ಪ, ಧಮ್ಕಿ, ಧಿಮಾಕು ಸಾಕು: ಡಿ.ಕೆ.ಸೋದರರ ವಿರುದ್ಧ ಹೆಚ್ ಡಿಕೆ ಕಿಡಿ

ಬೆಂಗಳೂರು: ಹಣ, ದರ್ಪ, ಧಮ್ಕಿ, ಧಿಮಾಕು ಇನ್ನು ಸಾಕು ಅನುಭವದಿಂದ ಪಾಠ ಕಲಿತರೇ ಒಳ್ಳೇಯದು ಇಲ್ಲವಾದರೆ ನಿಮಗೆ ಬಿಟ್ಟದ್ದು ಎಂದು ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಅವರ ವಿರುದ್ಧ ಮಾಜಿ ಸಿಎಂ ಮತ್ತು ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಈ ಕುರಿತು ಮಂಗಳವಾರ ಸರಣಿ ಟ್ವೀಟ್ ಮಾಡಿರುವ ಅವರು, ಕಲ್ಲು ಬಂಡೆಗಳನ್ನು ನುಂಗಿ, ಮಣ್ಣು ಬಗೆದು ಪರರಿಗೆ ಬಿಕರಿ ಮಾಡಿಕೊಂಡು ಕೋಟೆ ಕೊತ್ತಲಗಳನ್ನು ಕಟ್ಟಿಕೊಂಡು ಮೆರೆಯುತ್ತಿರುವ ʼಡಿಸೈನ್ ವೀರರಿಗೆʼ ನಮ್ಮ ನೆಲ, ನಮ್ಮ ಜಲ ಎನ್ನುವುದು ಈಗ ನೆನಪಿಗೆ ಬಂದಿದೆ. ಆಭದ್ರತೆ ಅಡಿಪಾಯವನ್ನೇ ಅಲ್ಲಾಡಿಸುತ್ತಿದೆ! ಅಲ್ಲವೇ? ಎಂದು ಹೆಸರು ಬಳಸದೇ ಡಿ.ಕೆ. ಸೋದರರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದಿದ್ದಾರೆ.
ಹಾದಿ ತಪ್ಪಿದ ರಾಜಕಾರಣ ಬಹಳ ದಿನ ನಡೆಯಲ್ಲ. ಹಣ, ದರ್ಪ, ಧಮ್ಕಿ, ಧಿಮಾಕು ಇನ್ನು ಸಾಕು. ಜನ ಕೊಟ್ಟೂ ನೋಡುತ್ತಾರೆ, ಕೆಲವೊಮ್ಮೆ ಬಿಟ್ಟೂ ನೋಡುತ್ತಾರೆ. ಅನುಭವದಿಂದ ಪಾಠ ಕಲಿತರೆ ಒಳ್ಳೆಯದು. ಉಳಿದದ್ದು ಅವರಿಗೇ ಬಿಟ್ಟಿದ್ದು ಎಂದೂ ಕುಮಾರಸ್ವಾಮಿ ಹೇಳಿದ್ದಾರೆ.
ಕನಕಪುರ, ರಾಮನಗರ ಯಾರೊಬ್ಬರ ಸ್ವತ್ತಲ್ಲ. ಈ ನೆಲದ ಮಕ್ಕಳು ಎಂದು ಬಡಾಯಿ ಬಿಡುವ ಸಹೋದರರು ಇದೇ ನೆಲವನ್ನು ಹೇಗೆಲ್ಲಾ ನುಂಗಿ ನೀರು ಕುಡಿಯುತ್ತಿದ್ದಾರೆ ಎಂಬುದು ನನಗಿಂತ ಇಲ್ಲಿನ ಜನರಿಗೇ ಚೆನ್ನಾಗಿ ಗೊತ್ತು. ಆಟ ಎಂದ ಮೇಲೆ ಅಂತ್ಯವೂ ಇರಬೇಕಲ್ಲವೇ? ಆ ಕ್ಷಣ ಹತ್ತಿರ ಬಂದಿದೆಯೇನೋ ಎಂದು ಹೇಳಿದ್ದಾರೆ.
ನಾವು ಹಾಸನದಿಂದ ಬಂದಿದ್ದೇವೆ, ನಿಜ. ಇಲ್ಲಿನ ಜನ ನಮ್ಮನ್ನು ಮನೆ ಮಕ್ಕಳೆಂದು ಭಾವಿಸಿದ್ದಾರೆ. ನಾವೂ ಹಾಗೆಯೇ ನಡೆದುಕೊಂಡಿದ್ದೇವೆ. ಜನರ ಪ್ರೀತಿ, ಅಭಿಮಾನ, ನಮ್ಮ ದುಡಿಮೆ ಫಲವಾಗಿ ಜಿಲ್ಲೆಯಲ್ಲಿ ರಾಜಕೀಯ ಮಾಡುತ್ತಿದ್ದೇವೆ. ಜನರೇ ನಮಗೆ ಅಧಿಕಾರ ನೀಡಿದ್ದಾರೆ ಎಂದಿದ್ದಾರೆ.
ಹರದನಹಳ್ಳಿ ಜನ್ಮ ಸ್ಥಳ- ಬಿಡದಿ ಕರ್ಮಸ್ಥಳ
ಹೌದು, ಹರದನಹಳ್ಳಿ ನನ್ನ ಜನ್ಮಸ್ಥಳ. ಬಿಡದಿ ನನ್ನ ಕರ್ಮಸ್ಥಳ. ಇದುವೇ ನನ್ನ ಪಾಲಿನ ಧರ್ಮಸ್ಥಳ. ಈ ಮಣ್ಣಲ್ಲಿಯೇ ನಾನು ಮಣ್ಣಾಗುವೆ ಎಂದು ಈಗಾಗಲೇ ಹೇಳಿದ್ದೇನೆ. ಇದರ ಹೊರತಾಗಿ ರಾಮನಗರಕ್ಕೆ ರಿಯಲ್ ಎಸ್ಟೇಟ್ ಮಾಡಲಿಕ್ಕೆ ನಾನು ಬಂದವನಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ.
