ಹೊಸ ವರ್ಷದ ಪಾರ್ಟಿಯಲ್ಲಿ ಶಿರಸಿ ವಿದ್ಯಾರ್ಥಿನಿಯರ ಮಸ್ತ್ ಮಜಾ
ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಕಾಲೇಜು ವಿದ್ಯಾರ್ಥಿಗಳು ಮೋಜು, ಮಸ್ತಿ ಮಾಡುತ್ತಿರುವುದು ಹಳೆಯ ಸುದ್ದಿ.ಇತ್ತೀಚೆಗಷ್ಟೆ ಗಾಂಜಾ ಸೇವಿಸುತ್ತಿದ್ದ ವಿದ್ಯಾರ್ಥಿಗಳಿಗೆ ಪೊಲೀಸರು ಬುದ್ದಿ ಮಾತು ಹೇಳಿದ್ದರು. ಇನ್ನು ಕಾಲೇಜಿನಲ್ಲಿಯೇ ಪ್ರಾಂಶುಪಾಲರು ಮೊಬೈಲ್ ಮತ್ತು ಸಿಗರೇಟ್ ಪ್ಯಾಕ್ ವಶಪಡಿಸಿಕೊಂಡಿದ್ದು ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಇದರ ಜೊತೆ ಹಿಂದೂ ಯುವತಿ ಹಾಗೂ ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಲವ್ ಜಿಹಾದ್ ಎಂಬ ಪಟ್ಟ ಕಟ್ಟಲಾಗಿತ್ತು. ಆದರೆ ಇದೀಗ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕಾಲೇಜಿಗೆ ಬಂಕ್ ಮಾಡಿ ಹುಡುಗರೊಂದಿಗೆ ಗುಂಡು ಹೊಡೆದು ಮೋಜು ಮಸ್ತಿಯಲ್ಲಿ ತೊಡಗಿಕೊಂಡಿರುವ ವಿಡಿಯೋ ಸದ್ದು ಮಾಡಿ ಶಿರಸಿ ಪಟ್ಟಣವನ್ನು ಬೆಚ್ಚಿ ಬೀಳಿಸಿದೆ.
ಶಿರಸಿ – ಯಲ್ಲಾಪುರ ನಾಖಾ ಬಳಿಯ ಖಾಸಗಿ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜಿನ ಸಮವಸ್ತ್ರದಲ್ಲಿಯೇ ಮದ್ಯ ಸೇವಿಸುತ್ತಾ ಅದೇ ಕಾಲೇಜಿನ ವಿದ್ಯಾರ್ಥಿಗಳ ಜೊತೆ ಮದ್ಯದ ಗುಂಗಿನಲ್ಲಿ ನೀರಿಗಿಳಿದು ಅಸಭ್ಯ ವರ್ತನೆ ತೋರಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾಲೇಜಿಗೆ ಬಂಕ್ ಹೊಡೆದು ಮೋಜು,ಮಸ್ತಿ ಮಾಡುತ್ತಿರುವ ವಿಡಿಯೋ ಸಹ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.
ಈ ವಿದ್ಯಾರ್ಥಿಗಳು ಮೋಜು ಮಸ್ತಿಗಾಗಿ ಶಿರಸಿಯ ಶಾಲ್ಮಲಾ ನದಿ ತೀರದ ಸಹಸ್ರಲಿಂಗವಿರುವ ಪವಿತ್ರ ಸ್ಥಳವನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಈಶ್ವರನ ಸನ್ನಿದಿಯು ಈ ರೀತಿ ಕೆಟ್ಟ ಕೆಲಸಕ್ಕೆ ಬಳಕೆ ಆಗುತ್ತಿರುವುದು ಆಸ್ತಿಕ ಜನರನ್ನು ಕೆರಳುವಂತೆ ಮಾಡಿದೆ.
ಇನ್ನು ಈ ರೀತಿಯ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದ್ದು, ಕಾಲೇಜು ಆಡಳಿತ ಮಂಡಳಿ, ಶಿಕ್ಷಕರು ಹಾಗೂ ಪಾಲಕರು ತೀವ್ರ ನಿಗಾ ವಹಿಸಬೇಕಾದ ಅಗತ್ಯವಿದೆ ಎನ್ನುವುದು ಪ್ರಜ್ಞಾವಂತರ ಆಗ್ರಹವಾಗಿದೆ. ಈ ಎಲ್ಲ ವಿದ್ಯಾರ್ಥಿಗಳು ಪ್ರತಿಷ್ಠಿತ ಕುಟುಂಬಕ್ಕೆ ಸೇರಿದವರೆಂಬ ಮಾತು ನಗರದೆಲ್ಲೆಡೆ ಕೇಳಿ ಬರುತ್ತಿದೆ.



