Breaking NewsLatestಮೆಟ್ರೋರಾಜಕೀಯರಾಜ್ಯರಾಮನಗರಸುದ್ದಿ

ಪಾದಯಾತ್ರೆ ಹೆಸರಲ್ಲಿ ಮೇಕೆದಾಟು ಮಕ್ಮಲ್ ಟೋಪಿ: ಕುಮಾರಸ್ವಾಮಿ ಲೇವಡಿ

ಬೆಂಗಳೂರು: ಮೇಕೆದಾಟು ಯೋಜನೆ  ಜಾರಿಗೆ ಆಗ್ರಹಿಸಿ ಪಾದಯಾತ್ರೆ  ಕೈಗೊಂಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್  ನನ್ನನ್ನೂ ಸೇರಿಸಿ 83 ತಾಲೂಕುಗಳ ಜನರಿಗೆ ʼಮೇಕೆದಾಟು ಮಕ್ಮಲ್ ಟೋಪಿʼ ಹಾಕಲು ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.ಈ ಕುರಿತು ಸರಣಿ ಟ್ವಿಟ್ ಮಾಡಿರುವ ಅವರು, ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ  ಹೆಚ್.ಡಿ.ದೇವೇಗೌಡರು ಕೊಟ್ಟ ಕಾಣಿಕೆ ಅಗಣಿತ. ತಮ್ಮ ಜೀವಿತಾವಧಿಯನ್ನೇ ಈ ನೆಲಕ್ಕೆ ನೀರು ಹರಿಸಲು ಮುಡಿಪಿಟ್ಟ ಭಗೀರಥರು. ಮೇಕೆದಾಟು ಯೋಜನೆ ಮೂಲ ರೂವಾರಿಯೇ ಅವರು. ಅವರನ್ನೇ ಮರೆತ ಕಾಂಗ್ರೆಸ್ ನಾಯಕರು ‘ಸತ್ಯಕ್ಕೆ ಸಮಾಧಿ’ ಕಟ್ಟುತ್ತಿದ್ದಾರೆ ಎಂದಿದ್ದಾರೆ.

ಅವರಿಗೆ ಸತ್ಯ ಹೇಳಲು ನಾಲಿಗೆ ಹೊರಳುತ್ತದೆ. ಆದರೆ; ಸತ್ಯಕ್ಕೆ ನಾಲಿಗೆ ಪ್ರಮೇಯವೇ ಇಲ್ಲ. ಸತ್ಯ ಸತ್ಯವೇ. ದೇವೇಗೌಡರು ಅಂತಹ ‘ಸತ್ಯದ ಸಾಕ್ಷಿ’. ನೀರಾವರಿಗಾಗಿ ಅವರು ಅವಿರತವಾಗಿ ಶ್ರಮಿಸಿ ನಡೆದಾಡಿದ ನೆಲದ ಮಣ್ಣಿನಮಕ್ಕಳ ನಂಬಿಕೆಯನ್ನೇ ʼಬುಲ್ಡೋಜ್ʼ ಮಾಡುವಂಥ ರಾಜಕಾರಣ ʼಕೈʼ ಪಕ್ಷ ಮಾಡುತ್ತಿದೆ. ಬೆಂಗಳೂರಿನ ನ್ಯಾಯಯುತ ಪಾಲು, ಕಾವೇರಿ 4ನೇ ಹಂತದ 9 ಟಿಎಂಸಿ ನೀರನ್ನು ತಮಿಳುನಾಡಿನ ಒತ್ತಡಕ್ಕೆ ಮಣಿದು ತಡೆದಿತ್ತು ಕಾಂಗ್ರೆಸ್. ಆಗ ಪಿ.ವಿ.ನರಸಿಂಹರಾವ್ ಪ್ರಧಾನಿ. ಕನ್ನಡಿಗರ ಕನಸುಗಳಿಗೆ ಕೊಳ್ಳಿ ಇಟ್ಟ ಅದೇ ಪಕ್ಷ ಈಗ ಸತ್ಯಗಳನ್ನು ಹೂತು ಮುಜುಗರವಿಲ್ಲದೆ ಪಾದಯಾತ್ರೆಯ ಹೆಸರಿನಲ್ಲಿ ಮತಯಾತ್ರೆಗೆ ಹೊರಟಿದೆ.

ಆಗ ಮುಖ್ಯಮಂತ್ರಿಯಾಗಿದ್ದ  ದೇವೇಗೌಡರನ್ನು ತಡೆದ ಪಕ್ಷಕ್ಕೆ ಪ್ರಧಾನಿಯಾದ ಗೌಡರನ್ನು ತಡೆಯಲು ಧೈರ್ಯ ಸಾಲಲಿಲ್ಲ. ಕಾಂಗ್ರೆಸ್ ಕುತ್ಸಿತಿತನದಿಂದ ತಡೆಯಲ್ಪಟ್ಟಿದ್ದ 9 ಟಿಎಂಸಿ ನೀರು ರಾಜ್ಯಕ್ಕೆ ದಕ್ಕುವ ಯೋಜನೆಗೆ ಮಣ್ಣಿನಮಗ ಎದೆಗುಂದದೆ ಹಸಿರುನಿಶಾನೆ ತೋರಿದ್ದರು. ಜಪಾನ್ʼನಿಂದ ಹಣವನ್ನೂ ತಂದರು. ಬೆಂಗಳೂರಿಗೆ ಕಾವೇರಿ ನೀರು ಕೊಟ್ಟವರು ದೇವೇಗೌಡರು. ಜೀವಜಲ ತಂದು ಬವಣೆ ನೀಗಿಸಿದವರು ಅವರೇ. ಈ ಭಗೀರಥನನ್ನೇ ಮರೆತ ಕಾಂಗ್ರೆಸ್ ‘ ಕೃತಘ್ನ ‘ ರಾಜಕಾರಣಕ್ಕೆ ಏನು ಹೇಳುವುದು? ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

Spread the love

Related Articles

Leave a Reply

Your email address will not be published. Required fields are marked *

Back to top button