
ಬೆಂಗಳೂರು: ಕೊರೊನಾ ಇದ್ದಾಗಲೇ ಬಿಜೆಪಿಯವರು ಜನಾಶೀರ್ವಾದ ಯಾತ್ರೆ ಮಾಡಿದ್ದಾರೆ, ಈಗ ಉತ್ತರ ಪ್ರದೇಶದಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರು ಚುನಾವಣಾ ಪ್ರಚಾರ ಮಾಡುತ್ತಿದ್ದಾರೆ. ನಮಗೆ ಬೇರೆ ಅವರಿಗೆ ಬೇರೆ ಎಂದು ಎರಡೆರಡು ಕಾನೂನು ಇದೆಯೇನ್ರೀ…? ಈ ಮಾತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರದು. ಕೊರೊನಾ ಹಿನ್ನೆಲೆಯ ರಾತ್ರಿ ಕರ್ಫ್ಯೂಗೂ ಹಾಗೂ ನಮ್ಮ ಪಕ್ಷದ ಪಾದಯಾತ್ರೆಗೂ ಯಾವುದೇ ಸಂಬಂಧವಿಲ್ಲ ಸ್ಪಷ್ಟಪಡಿಸಿದರು.
ಸೋಮವಾರ ತಮ್ಮ ನಿವಾಸಿದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆಯನ್ನು ನಾವು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳೊಂದಿಗೆ ಮಾಡುತ್ತೇವೆ. ಪಾದಯಾತ್ರೆಯ ತಯಾರಿ ಕೆಲಸ ನಡೆಯುತ್ತಿದೆ. ಹೀಗಾಗಿ ನಮ್ಮ ಪಾದಯಾತ್ರೆಗೆ ಸರ್ಕಾರ ಯಾವುದೇ ರೀತಿಯ ಕಡಿವಾಣ ಹಾಕಲು ಬರಲ್ಲ ಎಂದರು.
ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಬರುವ ಜ.9ರಿಂದ 19ರವರೆಗೆ ಪ್ರದೇಶ ಕಾಂಗ್ರೆಸ್ ಮೇಕೆದಾಟುನಿಂದ ಬೆಂಗಳೂರಿನವರೆಗೆ ಪಾದಯಾತ್ರೆ ಹಮ್ಮಿಕೊಂಡಿರುವುದನ್ನು ಸ್ಮರಿಸಬಹುದು.
ಸರ್ಕಾರ ತೊಲಗಿದರೆ ಸಾಕೆನಿಸಿದೆ
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ನನಗೆ ಮಾಹಿತಿಯಿಲ್ಲ. ಸರ್ಕಾರದಲ್ಲಿ ಆಡಳಿತ ಯಂತ್ರವೇ ಇಲ್ಲದ ಕಾರಣ ಈ ವಿಚಾರ ಯಾವುದೇ ಪರಿಣಾಮ ಬೀರುವುದಿಲ್ಲ. ಅಧಿಕಾರಿಗಳಿಗೆ ವರ್ಗಾವಣೆಗೆ ಲಂಚ ಕೊಟ್ಟು ಸಾಕಾಗಿ ಹೋಗಿದೆ, ಈ ಸರ್ಕಾರ ತೊಲಗಿದರೆ ಸಾಕು ಎಂದು ಅವರಿಗೂ ಅನ್ನಿಸತೊಡಗಿದೆ. ಜನರ ಆಶಯವೂ ಇದೇ ಆಗಿದೆ ಎಂದು ಹೇಳಿದರು.
ಆರ್ ಎಸ್ ಎಸ್ ಕಾಯ್ದೆ!
ಈ ಹಿಂದಿನ ಮತಾಂತರ ನಿಷೇಧ ಕರಡು ರೂಪಿಸಲು ತಮ್ಮದೇ ಸರ್ಕಾರ ಕಾರಣ ಎಂದು ಯಡಿಯೂರಪ್ಪ ಒಪ್ಪಿಕೊಂಡಿದ್ದಾರೆ. ಇದನ್ನು ಆರ್.ಎಸ್.ಎಸ್ ನವರೇ ಮಾಡಿಸಿದ್ದು ಎಂದು ಈಶ್ವರಪ್ಪನವರೂ ಒಪ್ಪಿಕೊಂಡಿದ್ದಾರೆ. ಹೀಗಿದ್ದಾಗ ನಮ್ಮ ಪಾತ್ರ ಏನಿರಲು ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಸುಳ್ಳು ಬಿಜೆಪಿ ಮನೆದೇವರು!
ನಿರುದ್ಯೋಗ, ಭ್ರಷ್ಟಾಚಾರ, ಹಸಿವು, ಬಡತನ ಹೀಗೆ ರಾಜ್ಯದಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಗಳಿವೆ. ಇವುಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸರ್ಕಾರ ಮಾಡುತ್ತಿರುವ ಹುನ್ನಾರ. ಈ ಕಾಯ್ದೆ ಒಂದು ಸೀಮಿತ ಧರ್ಮವನ್ನು ಗುರಿಯಾಗಿಟ್ಟುಕೊಂಡು ಜಾರಿಗೆ ತರುತ್ತಿರುವ ದುರುದ್ದೇಶದ ಕಾಯ್ದೆ ಎಂದರು. ಬಿಜೆಪಿಯವರು ಬರೀ ಸುಳ್ಳು ಹೇಳುವವರಿಂದಲೇ ತುಂಬಿದೆ. ನರೇಂದ್ರ ಮೋದಿ ಅವರಿಂದ ಹಿಡಿದು ಎಲ್ಲರೂ ಬರೀ ಸುಳ್ಳು ಹೇಳೋರೆ.
ಬಿಟ್ ಕಾಯಿನ್ ಹಗರಣ, 40% ಕಮಿಷನ್ ಪ್ರಕರಣ, ರೈತ ವಿರೋಧಿ ಕಾನೂನುಗಳ ವಾಪಾಸಾತಿ ಮುಂತಾದ ವಿಚಾರಗಳ ಚರ್ಚೆ ಮಾಡಬೇಕು, ಸದನವನ್ನು ಒಂದು ವಾರ ವಿಸ್ತರಿಸಿ ಎಂದು ಹಲವು ಬಾರಿ ಮನವಿ ಮಾಡಿದೆ. ಸರ್ಕಾರ ಇದಕ್ಕೆ ಅವಕಾಶ ನೀಡದೆ ತರಾತುರಿಯಲ್ಲಿ ಸದನ ಮುಗಿಸಿತು ಎಂದು ಸಿದ್ದರಾಮಯ್ಯ ದೂರಿದರು.
