Breaking NewsLatestಬೆಳಗಾವಿರಾಜ್ಯಸುದ್ದಿ

ಮತಾಂತರ ನಿಷೇಧ ಕಾಯ್ದೆಗೆ ಆರ್.ಎಸ್.ಎಸ್ ಮತ್ತು ಬಿಜೆಪಿಯೇ ಮೂಲ : ದಾಖಲೆ ಸಮೇತ ಸಿದ್ದರಾಮಯ್ಯ ಆರೋಪ

ಬೆಳಗಾವಿ : ಮತಾಂತರ ನಿಷೇಧ ಕಾಯ್ದೆ ಆರ್.ಎಸ್.ಎಸ್ ಮತ್ತು ಬಿಜೆಪಿ ಸರ್ಕಾರದ ಕೂಸು ಎಂದು ಮಾಜಿ ಮುಖ್ಯಮಂತ್ರಿ ಹಾಗು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿರುವ ಸಿದ್ದರಾಮಯ್ಯ ಹೇಳಿದ್ದಾರೆ.

ಸುವರ್ಣಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು,  ಮತಾಂತರ ನಿಷೇಧ ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ದಾಖಲೆ ಬಿಡುಗಡೆ ಮಾಡಿದರು.

2009 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ ಆರ್.ಎಸ್.ಎಸ್ ಮೂಲದ ಚಿದಾನಂದ ಮೂರ್ತಿ, ನರಹರಿ, ಬಿ.ಎನ್ ಮೂರ್ತಿ, ಜಯದೇವ, ಆರ್.ಲೀಲಾ, ಮುತ್ತೂರು ಕೃಷ್ಣಮೂರ್ತಿ ಎಂಬುವವರು ಕಾನೂನು ಆಯೋಗಕ್ಕೆ ಮತಾಂತರ ನಿಷೇಧ ಕಾಯ್ದೆ ರೂಪಿಸಿ, ಜಾರಿಗೊಳಿಸುವಂತೆ ಮನವಿ ಮಾಡಿದ್ದರು.

ಕಾನೂನು ಆಯೋಗದವರು 2013 ರಲ್ಲಿ ಕಾನೂನು ಇಲಾಖೆಗೆ ಕರಡು ನೀಡಿತು. ನಂತರ ಈ ಕರಡು ಕಾನೂನು ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯಲ್ಲಿ ಚರ್ಚೆಯಾಗಿ ನಮ್ಮ ಕೈಸೇರಿದ್ದು 2015 ರಲ್ಲಿ. ಇದನ್ನು ನಾವು ಸಚಿವ ಸಂಪುಟದ ಮುಂದಿಟ್ಟು ಚರ್ಚೆ ಮಾಡಿಲ್ಲ, ಅನುಮೋದನೆಯನ್ನೂ ನೀಡಿಲ್ಲ ಎಂದು ಸ್ಪಷ್ಟಪಡಿಸಿದರು.

ಮುಖ್ಯಮಂತ್ರಿ ಈ ರೀತಿ ಸಂಪುಟ ಚರ್ಚೆಗೆ ತನ್ನಿ ಎಂದ ಅನೇಕ ವಿಷಯಗಳು, ಕಡತಗಳು ತಿರಸ್ಕರಿಸಲ್ಪಟ್ಟಿವೆ, ಕೆಲವು ಮುಂದೂಡಲ್ಪಟ್ಟಿವೆ, ಇನ್ನು ಕೆಲವು ಸಂಪುಟ ಉಪ ಸಮಿತಿಗೆ ಹೋಗಿವೆ. ಈ ಎಲ್ಲಾ ಕಡೆ ಸಚಿವರಿಗೆ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಇದೆ ಎಂದರು.

ಈ ಹಿಂದಿನ ಕರಡು ಪ್ರತಿಗೂ, ಈಗಿನ ಕರಡು ಮಸೂದೆಗೂ ಬಹಳಷ್ಟು ವ್ಯತ್ಯಾಸಗಳಿವೆ. ಮದುವೆ ಎಂಬ ಪದ ಹೊಸದಾಗಿ ಸೇರಿಸಲಾಗಿದೆ, ಸಾಕ್ಷ್ಯಾಧಾರ ಕೊರತೆ ಎದುರಾದಾಗ ದೂರುದಾರರಿಗೆ ಅನುಕೂಲವಾಗುವಂತೆ ನಿಯಮವಿದೆ, ಮಹಿಳೆಯರು, ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ, ಅಪ್ರಾಪ್ತರಿಗೆ, ಬುದ್ದಿಭ್ರಮಣೆಯಾದವರನ್ನು ಮತಾಂತರ ಮಾಡಿದಾಗ ಗರಿಷ್ಠ ಶಿಕ್ಷೆ ವಿಧಿಸಲಾಗಿದೆ. ಆದರೆ ಇವುಗಳಿಗೆ ಕಾನೂನಿನಲ್ಲಿ ಅವಕಾಶ ಇಲ್ಲ. ಕಾನೂನಿನ ಎದುರು ಸರ್ವರೂ ಸಮಾನರು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಮ್ಮ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಹೆಚ್.ಆಂಜನೇಯ ಅವರು ಕರಡು ಪ್ರತಿಯನ್ನು ನೋಡಿ, ಇದನ್ನು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಬರೆದು, ಅದನ್ನು ಬದಿಗೆ ಹಾಕಿದ್ದರು. ನಮಗೆ ಇಂಥದ್ದೊಂದು ಕಾಯ್ದೆ ತರುವ ಬಗ್ಗೆ ಕಾಳಜಿ ಇದ್ದಿದ್ದರೆ 2015 ರ ನವೆಂಬರ್ ನಲ್ಲಿ ಸಹಿ ಹಾಕಿ ಸಂಪುಟ ಚರ್ಚೆಗೆ ಕಳುಹಿಸಿದ್ದ ಕಡತ, ತಿರಸ್ಕಾರಗೊಂಡ ನಂತರ ಎರಡೂವರೆ ವರ್ಷ ನಾವು ಅಧಿಕಾರದಲ್ಲಿ ಇದ್ದರೂ ಒಮ್ಮೆಯೂ ಅದರ ಕಡೆ ಗಮನ ನೀಡಿಲ್ಲ. ನಮಗೆ ಅದರ ಅಗತ್ಯವೂ ಇರಲಿಲ್ಲ ಎಂದು ವಿವರಿಸಿದರು.

ಸಂವಿಧಾನರೀತ್ಯ ಕಾಂಗ್ರೆಸ್ ಈ ಕಾಯ್ದೆಯನ್ನು ವಿರೋಧಿಸಿದೆ. ಯಾವುದೋ ಒಂದು ಧರ್ಮವನ್ನು ಗುರಿಯಾಗಿರಿಸಿ ಕಾಯ್ದೆ ರೂಪಿಸಲು ಮುಂದಾಗಿದ್ದಾರೆ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ರಾಜ್ಯದಲ್ಲಿ ಹಲವು ಜ್ವಲಂತ ಸಮಸ್ಯೆಗಳಿದ್ದಾವೆ, ಇವುಗಳಿಂದ ಜನರನ್ನು ವಿಮುಖಗೊಳಿಸಲು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ಹೊರಟಿದ್ದಾರೆ ಎಂದು ದೂರಿದರು.

ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮನವಿ ಮಾಡಿದ್ದರಿಂದ ಕಾನೂನು ಆಯೋಗದವರು ಕರಡು ರಚನೆ ಮಾಡಿ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದು ಆರ್.ಎಸ್.ಎಸ್ ಮತ್ತು ಯಡಿಯೂರಪ್ಪ ಅವರ ಸರ್ಕಾರದ ಕೂಸು. ನಮ್ಮದಲ್ಲ ಎಂದೂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Related Articles

Leave a Reply

Your email address will not be published. Required fields are marked *

Back to top button