ವಿಧಾನಸಭೆ: ಕಾಂಗ್ರೆಸ್ ಸದಸ್ಯರಿಂದ ಕಲಾಪ ಬಹಿಷ್ಕಾರ

ಬೆಳಗಾವಿ: ಭೂ ಕಬಳಿಕೆ ಆರೋಪ ಎದುರಿಸುತ್ತಿರುವ ಸಚಿವ ಭೈರತಿ ಬಸವರಾಜು ನಡೆಸಿದ್ದಾರೆ ಎನ್ನಲಾದ ಹಗರಣದ ಬಗ್ಗೆ ಚರ್ಚಿಸಲು ವಿಧಾನಸಭೆಯಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಕಾಂಗ್ರೆಸ್ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.
ಭೋಜನ ವಿರಾಮಕ್ಕೂ ಮುನ್ನ ಬೆಳಗಿನ ಕಲಾಪದಲ್ಲಿ ಸಚಿವ ಬೈರತಿ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಪಟ್ಟು ಹಿಡಿದು ಧರಣಿ ನಡೆಸಿದ ಪರಿಣಾಮ ಉಂಟಾದ ಗದ್ದಲ, ಗೊಂದಲ ಮತ್ತು ಕೋಲಾಹಲದ ಪರಿಣಾಮವಾಗಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕಲಾಪವನ್ನು ಮಧ್ಯಾಹ್ನ 2 ಕ್ಕೆ ಮುಂದೂಡಿದ್ದರು.
ಭೋಜನ ವಿರಾಮದ ನಂತರ ಕಾಂಗ್ರೆಸ್ ಸದಸ್ಯರು ಪಟ್ಟು ಹಿಡಿದು ಧರಣಿ ಮುಂದುವರಿಸಿದ್ದರು.
ಸಭಾತ್ಯಾಗದ ನಂತರ ಸದನದಿಂದ ಹೊರನಡೆದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು. ಭೂ ಅವ್ಯವಹಾರದ ಆರೋಪ ಎದುರಿಸುತ್ತಿರುವ ಐವರಲ್ಲಿ ಇಬ್ಬರು ರಾಜಕಾರಿಣಿಗಳು. ಒಬ್ಬರು ಸಚಿವ ಭೈರತಿ ಬಸವರಾಜ್, ಮತ್ತೊಬ್ಬರು ಶಂಕರ್. ಇವರ ವಿರುದ್ಧ ಸಹಿ ಫೋರ್ಜರಿ, ವಂಚನೆ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ತಿಂಗಳಾದರೂ ರಾಜೀನಾಮೆ ಪಡೆದಿಲ್ಲ ಎಂದು ದೂರಿದರು.
ಕೂಡಲೇ ರಾಜೀನಾಮೆ ನೀಡಬೇಕೆಂದು ನಾವು ಆಗ್ರಹಿಸಿದ್ದೇವೆ. ಈ ಹಿಂದೆ ಗಣಪತಿ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ರಾಜೀನಾಮೆಗೆ ಬಿಜೆಪಿಯವರು ಒತ್ತಾಯಿಸಿದ್ದರು. ಅವರೂ ನೀಡಿದ್ದರು. ಅಂದು ದಾಖಲಾಗಿದ್ದ ಪ್ರಕರಣದ ಮಾದರಿಯಂತೆಯೇ ಇಂದೂ ಪ್ರಕರಣ ದಾಖಲಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು ಎನ್ನುವುದು ನಮ್ಮ ಉದ್ದೇಶವಾಗಿತ್ತು. ನಮ್ಮ ಮನವಿಯನ್ನು ಸ್ಪೀಕರ್ ತಿರಸ್ಕಾರ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ದೂರಿದರು.
