ಮಗಳನ್ನೇ ಕೊಂದ ತಂದೆ; ಸಿಟ್ಟಿಗೆದ್ದ ಜನರಿಂದ ಆರೋಪಿ ಥಳಿಸಿ, ಮೆರವಣಿಗೆ

ದಾವಣಗೆರೆ: ಹೆಣ್ಣು ಮಗು ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಿ ಮಗುವಿನ ತಂದೆಗೆ ಹಿಗ್ಗಾಮುಗ್ಗಾ ಥಳಿಸಿ, ಮೆರವಣಿಗೆ ಮಾಡಿರುವ ಘಟನೆ ದಾವಣಗೆರೆಯ ಅಖ್ತರ್ ರಜಾ ವೃತ್ತದ ಬಳಿ ನಡೆದಿದೆ
ಹೆಣ್ಣು ಮಗು ಜನಿಸಿದೆ ಎಂದು ಮಗುವನ್ನು ಎತ್ತಿಕೊಂಡು ಮೇಲಿಂದ ನೆಲಕ್ಕೆ ಬಿಟ್ಟು ತಂದೆತೇ ಕೊಂದು ಹಾಕಿದ್ದಾನೆ ಎಂದು ಆಕ್ರೋಶಗೊಂಡ ಜನರು ಮನಬಂದಂತೆ ಹೊಡೆದಿದ್ದಾರೆ.
ಮನ್ಸೂರ್ ಎಂಬಾತ ಹೆತ್ತ ಮಗಳ ಪ್ರಾಣ ತೆಗೆದಿದ್ದ ಕೀಚಕ ತಂದೆ ಎನ್ನಲಾಗುತ್ತಿದೆ. ದಾವಣಗೆರೆ ನಗರದ ಮಿಲ್ಲತ್ ಕಾಲೋನಿಯ ನಿವಾಸಿಯಾಗಿದ್ದು, ಮಿಲ್ಲತ್ ಕಾಲೋನಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಮನಕಲಕುವ ಪ್ರಕರಣ ನಡೆದಿತ್ತು. ಅಂದು ನಡೆದ ಘಟನೆ ಇದೀಗ ತಡವಾಗಿ ಬೆಳಕಿಗೆ ಬಂದಿದ್ದು, ಮಗಳನ್ನು ಸಾಯಿಸಿದ್ದಾನೆ ಎಂಬ ಕಾರಣಕ್ಕೆ ಸ್ಥಳೀಯರು, ಕಳೆದ ದಿನ ಆರೋಪಿ ಮನ್ಸೂರ್ ಹಾಗು ಆತನ ತಮ್ಮ ಮೈನುದ್ದೀನ್‌ನನ್ನು ಹಿಗ್ಗಾಮುಗ್ಗ ಥಳಿಸಿ ಬೀದಿಯಲ್ಲಿ ಮೆರವಣಿಗೆ ಮಾಡಿದ್ದಾರೆ.
ಈ ಹಿಂದೆ ಮಸೀದಿ ಜಮಾಯತ್ ನಿಂದ ಪಂಚಾಯಿತಿ ಮಾಡಲು ಸಭೆ ಕರೆಯಲಾಗಿತ್ತು. ಸಭೆಗೆ ಆರೋಪಿ ಬಾರದ ಹಿನ್ನೆಲೆ ಜನರೇ ಮನ್ಸೂರ್ ಹಾಗೂ ಆತನ ತಮ್ಮ ಮೈನುದ್ದೀನ್ ಅನ್ನು ಹಿಡಿದು ಜಮಾಯತ್ ಬಳಿ ಕರೆ ತಂದಿದ್ದಾರೆ. ಸಹೋದರನಾಗಿರುವ ಕಾಂಗ್ರೆಸ್ ಮುಖಂಡ ಮೈನುದ್ದೀನ್ ಇದರಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆ ಮೈನುದ್ದೀನ್ ಆತನ ಅಣ್ಣ ಮನ್ಸೂರ್ ಇಬ್ಬರನ್ನು ಸಾರ್ವಜನಿಕರು ಥಳಿಸಿದ್ದಾರೆ. ಮೂರು ತಿಂಗಳ ಹಿಂದೆ ಹಲ್ಲೆ ಮಾಡಿದ್ದ ವೇಳೆ ಅಸ್ವಸ್ಥಗೊಂಡ ಮಗುವನ್ನು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಸಹ ಆತ ಆಸ್ಪತ್ರೆಗೆ ಭೇಟಿ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ಜನ ಆರೋಪಿಗಳನ್ನು ಮೆರವಣಿಗೆ ಮಾಡಿಸಿದ್ದಾರೆ. ಘಟನೆ ಕುರಿತು ಮೂರು ತಿಂಗಳ ಬಳಿಕ ಸತ್ಯ ಹೊರ ಬಂದಿದ್ದು, ಹಲ್ಲೆ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದ್ರೆ ಹಲ್ಲೆಗೊಳಗಾದ ಮನ್ಸೂರ್ ಮಾತ್ರ ತನ್ನ ಪತ್ನಿ ಮನೆ ಕಡೆಯವರು ಹಾಗೂ ಕೆಲವರು ವಿನಾಕಾರಣ ಹಲ್ಲೆ ನಡೆಸಿದ್ದಾರೆ. ನನ್ನದೇನೂ ತಪ್ಪಿಲ್ಲ ಎಂದು ಹೇಳಿದ್ದಾನೆ.




