ಚಿಕ್ಕಮಗಳೂರು: ಬಿಜೆಪಿ ಅಭ್ಯರ್ಥಿ ಎಂ.ಕೆ ಪ್ರಾಣೇಶ್ ಅತ್ಯಲ್ಪ ಮತಗಳ ಅಂತರದಲ್ಲಿ ಗೆಲುವು

ಚಿಕ್ಕಮಗಳೂರು: ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ ಕೆ ಪ್ರಾಣೇಶ್ ಅತ್ಯಲ್ಪ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು, ಈ ಬಾರಿ ಜಿಲ್ಲೆಯಲ್ಲಿ ಬಿಜೆಪಿ-ಕಾಂಗ್ರೆಸ್ ಪಕ್ಷಗಳ ನಡುವೆ ಭಾರೀ ಪೈಪೋಟಿ ನಡೆದಿರುವುದು ಸ್ಪಷ್ಟವಾಗಿದೆ.
ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರು ಕೇವಲ 6 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ. ಭಾರೀ ಮತಗಳ ಅಂತರದಿಂದ ಗೆಲುವು ದಾಖಲಿಸುವ ಬಿಜೆಪಿಯ ನಿರೀಕ್ಷೆ ಹುಸಿಯಾಗಿದ್ದು, ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಬಲ್ಯ ಹೆಚ್ಚುತ್ತಿರುವುದು ಇದರಿಂದ ತಿಳಿಯಬಹುದಾಗಿದೆ.
ಸ್ಥಳೀಯ ಸಂಸ್ಥೆಗಳಿಂದ ಜಿಲ್ಲೆಯಲ್ಲಿ ಒಟ್ಟು 2410 ಮತಗಳು ಚಲಾವಣೆಯಾಗಿದ್ದು, 39 ಮತಗಳು ತಿರಸ್ಕೃತಗೊಂಡಿವೆ. ಬಿಜೆಪಿಯ ಎಂ ಕೆ ಪ್ರಾಣೇಶ್ 1189 ಮತ ಗಳಿಸಿ ಜಯಶೀಲರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಅವರಿಗೆ 1183 ಮತಗಳು ಲಭ್ಯವಾಗಿದ್ದು 6 ಮತಗಳ ಅಂತರದಿಂದ ಪರಾಭಾವಗೊಂಡಿದ್ದಾರೆ.
ಚುನಾವಣಾಧಿಕಾರಿಗಳಿಂದ ಅಧಿಕೃತ ಘೊಷಣೆಯಾಗಬೇಕಿದೆ. ಈ ನಡುವೆ ಕಾಂಗ್ರೆಸ್ ಅಭ್ಯರ್ಥಿ ಗಾಯತ್ರಿ ಶಾಂತೇಗೌಡ ಮರು ಎಣಿಕೆ ಪ್ರಕ್ರಿಯೆ ನಡೆಯಬೇಕೆಂದು ಕೋರಿದ್ದಾರೆ.



