ಮತಾಂತರ ಕುರಿತು ಅಧಿವೇಶನದಲ್ಲಿ ಸರ್ಕಾರ ಗಟ್ಟಿ ನಿರ್ಧಾರಕ್ಕೆ ಬರಬೇಕು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ಬಾಗಲಕೋಟೆ: ಬೆಳಗಾವಿ ಅಧಿವೇಶನದಲ್ಲಿ ವ್ಯಾಪಕ ಚರ್ಚೆ ನಡೆಸುವ ಮೂಲಕ ಮತಾಂತರ ಕಾಯ್ದೆ ವಿಚಾರದಲ್ಲಿ ಸರ್ಕಾರ ಒಂದು ಗಟ್ಟಿ ನಿರ್ಧಾರ ತೆಗೆದುಕೊಳ್ಳಲೇಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿದ ಅವರು, ಮಂಗಳೂರು ಆತ್ಮಹತ್ಯೆ, ಲವ್ ಜಿಹಾದಿ ಪ್ರಕರಣಗಳ ನಂತರ, ದೇಶದಲ್ಲಿ ಮತಾಂತರ ಕಾಯ್ದೆ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ದೊಡ್ಡ ಪ್ರಮಾಣದಲ್ಲಿ ಎಲ್ಲ ಜಾತಿ ವರ್ಗದ ಜನರನ್ನ ಅವರ ಬಡತನವನ್ನು ಮತಾಂತರಕ್ಕೆ ಬಳಕೆ ಮಾಡಲಾಗುತ್ತಿದೆ ಎಂದು ಅವರು ಆಪಾದಿಸಿದರು. ಸರಕಾರ ಗಂಭೀರವಾಗಿ ಯೋಚನೆ ಮಾಡಬೇಕು. ಸಾಮಾಜಿಕ ಅಸಮತೋಲನೆ ನಿರ್ಮಾಣ ಆಗಬಾರದು. ನಮ್ಮ ಬಡತನ ನಮ್ಮ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಳ್ಳಲು ಯಾರಿಗೂ ಅವಕಾಶ ಕೊಡಬಾರದು ಎಂದರು.
ನಾವು ಕೂಡ ಸಮಾಜದ ಎಲ್ಲ ವರ್ಗದ ಜನರ ಅಭಿವೃದ್ಧಿ ಬಗ್ಗೆ ಯೋಚನೆ ಮಾಡಬೇಕು. ಯಾವ ಕಾರಣಕ್ಕೆ ಧರ್ಮವನ್ನು ಬಿಟ್ಟು ಹೋಗೋದಕ್ಕೆ ಸಾಧ್ಯವಾಗಿದೆ. ಇದಕ್ಕೆ ಜಾತಿ ಕಾರಣವೋ, ಆರೋಗ್ಯ ಕಾರಣವೋ, ಆರ್ಥಿಕ ಪರಿಸ್ಥಿತಿ ಕಾರಣವೋ, ಸಾಮಾಜಿಕ ಅಡತಡೆಗಳು ಕಾರಣವೋ ಅನ್ನೋದನ್ನು ಪ್ರಾಮಾಣಿಕವಾಗಿ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ಮಾಡಿದರು.
ಮತಾಂತರ ಕಾಯ್ದೆ ಚರ್ಚೆಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿರುವ ಕುರಿತು ಮಾತನಾಡಿದ ಅವರು ಕಾಂಗ್ರೆಸ್ ನವರು ಜಾತಿ, ಧರ್ಮದ ಆಧಾರದಲ್ಲಿ ರಾಜಕಾರಣ ಮಾಡುತ್ತಾರೆ ಎಂದು ದೂರಿದರು.
ನರೇಂದ್ರ ಮೋದಿಯವರು ಅಭಿವೃದ್ಧಿ ಹೆಸರಲ್ಲಿ ವೋಟ್ ಕೇಳುತ್ತಾರೆ. ಡಿ.ಕೆ.ಶಿವಕುಮಾರ್ ಇದರ ಬಗ್ಗೆ ಹೆಚ್ಚು ಚರ್ಚೆ ಮಾಡದೆ ಇರುವುದು ಒಳ್ಳೆಯದು ಎಂದು ಅವರು ಕಿವಿ ಮಾರು ಹೇಳಿದರು.ಕಾಂಗ್ರೆಸ್ ನಿಂತಿರುವುದು ಒಂದು ವರ್ಗವನ್ನು, ಜಾತಿಯನ್ನು, ಧರ್ಮವನ್ನು ಓಲೈಸುವ ಆಧಾರದ ಮೇಲೆ ಮುಂದುವರಿದಿದೆ. ಜನರನ್ನು ಓಲೈಸಿಕೊಂಡು ಅಧಿಕಾರದಲ್ಲಿ ಇರಬಹುದು ಎನ್ನುವ ಮನೋಭಾವದಲ್ಲಿ ಇದ್ದಾರೆ. ಆದರೆ ದೇಶದ ಜನ ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ತಾವು ಏನು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಸಂಸದ ಪಿಸಿ ಗದ್ದಿಗೌಡರ,ಶಾಸಕ ವೀರಣ್ಣ ಚರಂತಿಮಠ,ಮಾಜಿ ಶಾಸಕ ಪಿಎಚ್ ಪೂಜಾರ್ ಇದ್ದರು.



