ರಾಮನಗರ

ಕೆಎಸ್ಆರ್ಟಿಸಿ ವಿಭಾಗೀಯ ಕಚೇರಿಗೆ ಶಿವಯೋಗಿ ಸಿ ಕಳಸದ್ ಭೇಟಿ, ಪರಿಶೀಲನೆ

ರಾಮನಗರ: ಕೋವಿಡ್ ಸೋಂಕು ಕಡಿಮೆಯಾದ ನಂತರ ಬಸ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಪ್ರಯಾಣಿಕರ ಸಂಖ್ಯೆಯೂ ಹೆಚ್ಚಾಗಿದೆ. ರಾಮನಗರದಿಂದ ಬೆಂಗಳೂರು ಕೆಡೆಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚು. ಆದರೆ ಆ ಕಡೆಯಿಂದ ಇಲ್ಲಿಗೆ ಬರುವ ಪ್ರಯಾಣಿಕರ ಸಂಖ್ಯೆ ಕಡಿಮೆ ಇದೆ. ಹೀಗಾಗಿ ಬಸ್‌ಗಳನ್ನು ರೀ-ಡಿಪ್ಲಾಯಿಂಟ್ ಮಾಡುವ ಅವಶ್ಯಕತೆ ಇದೆ ಎಂದು ಕೆ.ಎಸ್.ಆರ್.ಟಿ.ಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ ಕಳಸದ್ ತಿಳಿಸಿದರು.

ಜಿಲ್ಲಾ ಕೇಂದ್ರ ರಾಮನಗರದ ಬಸ್ ನಿಲ್ದಾಣ, ವಿಭಾಗೀಯ ಕಚೇರಿಗೆ ಬೇಟಿ ಕೊಟ್ಟು ಪರಿಶೀಲನೆ ನಡೆಸಿದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕೋವಿಡ್ ಕಾರಣ 2 ವರ್ಷಗಳಿಂದ ಹೊಸ ಬಸ್‌ಗಳನ್ನು ಸರ್ಕಾರ ಖರೀದಿ ಮಾಡಿಲ್ಲ. ಕೆ.ಎಸ್.ಆರ್.ಟಿ.ಸಿ ನಿಯಮಗಳ ಪ್ರಕಾರ 9 ಲಕ್ಷ ಕಿಮೀ ಸಂಚರಿಸಿರುವ ಬಸ್ಸುಗಳು ಅಥವಾ 6 ವರ್ಷ ಓಡಾಟ ನಡೆಸಿರುವ ಬಸ್‌ಗಳನ್ನು ಸ್ಕ್ರಾಪ್‌ಗೆ ಕಳುಹಿಸಬೇಕು. ಆದರೆ ಬಸ್‌ಗಳ ಕೊರತೆ ಇರುವ ಕಾರಣ ಸಂಚಾರ ಯೋಗ್ಯವಾಗಿರುವ ಕೆಲವು ಬಸ್‌ಗಳನ್ನು ಓಡಿಸಲಾಗುತ್ತಿದೆ ಎಂದರು.

ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೆಚ್ಚುವರಿ ಬಸ್‌ಗಳನ್ನು ಓಡಿಸಲು ಸೂಚಿಸಲಾಗಿದೆ. ಸಂಸ್ಥೆಯ ಅಧಿಕಾರಿಗಳೇ ಖುದ್ದು ಸ್ಥಳಗಳಿಗೆ ಭೇಟಿ ಕೊಟ್ಟು ಈ ವಿಚಾರದಲ್ಲಿ ಪರಿಶೀಲನೆ ನಡೆಸಿ ಸೂಕ್ತವಾಗಿ ಸ್ಪಂದಿಸುತ್ತಾರೆ ಎಂದರು. ಜಿಲ್ಲೆಯಲ್ಲಿ 3500 ಪಾಸ್‌ಗಳನ್ನು ವಿತರಿಸಲಾಗಿದೆ. ಆದರೆ 40 ಬಸ್‌ಗಳು ಮಾತ್ರ ಸಂಚರಿಸುತ್ತವೆ. ಹೀಗಾಗಿ ತಮಗೆ ಅನಾನುಕೂಲವಾಗುತ್ತಿದೆ ಎಂಬ ಕಾರಣಕ್ಕೆ ಪ್ರತಿಭಟನೆಗಳು ನಡೆಯುತ್ತಿವೆ ಎಂದು ಸುದ್ದಿಗಾರರು ಗಮನ ಸೆಳೆದಾಗ ಅವರು ಹೀಗೆ ಪ್ರತಿಕ್ರಿಯಿಸಿದರು.

ಜಿಲ್ಲಾ ಕೇಂದ್ರ ರಾಮನಗರದಲ್ಲಿ ಮೈಸೂರು ಕಡೆಗೆ ಹೋಗುವ ಬಸ್‌ಗಳಿಗೆ ನಿಲ್ದಾಣವಿಲ್ಲ ಎಂದು ಸುದ್ದಿಗಾರರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು ಐಜೂರು ವೃತ್ತದ ಬಳಿ ಬಸ್ ಬೇ ನಿರ್ಮಿಸುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿದೆ ಎಂದರು.

ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಯ ವೇತನ ಪಾವತಿ ಸಮಸ್ಯೆ ಕೆಲವೇ ದಿನಗಳಲ್ಲಿ ಪರಿಹಾರ ಸಿಗುವ ಸಾಧ್ಯತೆ ಇದೆ ಎಂದು ಸಂಸ್ಥೆಯ ಎಂ.ಡಿ. ಶಿವಯೋಗಿ ಸಿ. ಕಳಸದ್ ತಿಳಿಸಿದರು. ಕೋವಿಡ್ ಕಾರಣ ಸಂಸ್ಥೆಯ ಆದಾಯ ಕ್ಷೀಣಿಸಿದೆ. ಸಿಬ್ಬಂದಿಯ ವೇತನ ಪಾವತಿಯಲ್ಲಿ ವ್ಯತ್ಯಯವಾಗಿದೆ. ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಅರ್ಧ ವೇತನ ಪಾವತಿಸಲಾಗಿತ್ತು. ಉಳಿದ ವೇತನ ಪಾವತಿಗೆ ಸರ್ಕಾರ ಇತ್ತೀಚೆಗಷ್ಟೇ ಅನುದಾನ ಬಿಡುಗಡೆ ಮಾಡಿದೆ. ಇನ್ನು ಮೂರು ದಿನಗಳಲ್ಲಿ ಎರಡು ತಿಂಗಳುಗಳ ವೇತನ ಬಾಕಿ ಪಾವತಿಸಲಾಗುವುದು. ನವೆಂಬರ್ ತಿಂಗಳ ವೇತನದಲ್ಲಿ ಅರ್ಧ ಮೊತ್ತವನ್ನು ಸಂಸ್ಥೆಯ ಸಂಪನ್ಮೂಲದಲ್ಲೇ ಕೊಡಲಾಗಿದೆ ಎಂದು ತಿಳಿಸಿದರು.

ವ್ಯವಸ್ಥಾಪಕ ನಿರ್ದೇಶಕರ ಭೇಟಿಯ ವೇಳೆ ಇಲ್ಲಿನ ವಿಭಾಗೀಯ ನಿಯಂತ್ರಣಾಧಿಕಾರಿ ಲಕ್ಷ್ಮಣ ಎಸ್., ವಿಭಾಗೀಯ ಸಂಚಲನಾಧಿಕಾರಿ ಪುರುಷೋತ್ತಮ, ವಿಭಾಗೀಯ ತಾಂತ್ರಿಕ ಶಿಲ್ಪಿ ಚಿನ್ನಚುಂಚಯ್ಯ, ಭದ್ರತಾ ಮತ್ತು ಜಾಗೃತಾಧಿಕಾರಿ ಶಿವ ಪ್ರಕಾಶ್, ಘಟಕ ವ್ಯವಸ್ಥಾಪಕ ಶೇಷುಮೂರ್ತಿ ಮತ್ತಿತರರು ಇದ್ದರು.

Spread the love

Related Articles

Leave a Reply

Your email address will not be published. Required fields are marked *

Back to top button