ಉತ್ತರ ಕನ್ನಡ ವಿಧಾನ ಪರಿಷತ್ ಚುನಾವಣೆ : ಝಣಝಣ ಕಾಂಚಾಣ, ಹರಿಯುತ್ತಿದೆ ಹಣದ ಥೈಲಿ

ವಿಶೇಷ ವರದಿ: ತೇಜಸ್ವಿ ಬಿ.ನಾಯ್ಕ
ಕಾರವಾರ : ಸ್ಥಳೀಯ ಸಂಸ್ಥೆಗಳ ಕ್ಷೇತ್ರಕ್ಕೆ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಇನ್ನೇನು ಕೆಲ ದಿನಗಳು ಬಾಕಿ ಇರುವಾಗ ಮತದಾರ ಜನಪ್ರತಿನಿಧಿಗಳನ್ನು ಒಲಿಸಿಕೊಳ್ಳಲು ಎರಡು ಪ್ರಮುಖ ಪಕ್ಷಗಳು ಇನ್ನಿಲ್ಲದ ಕಸರತ್ತಿನಲ್ಲಿ ನಿರತವಾಗಿವೆ.
ಚುನಾವಣೆಯಲ್ಲಿ ಐವರು ಅಭ್ಯರ್ಥಿಗಳು ಕಣದಲ್ಲಿ ಇದ್ದರೂ ನೇರ ಸ್ಪರ್ಧೆ ಇರುವುದು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮಾತ್ರ.ಇನ್ನುಳಿದ ಮೂವರು ಪಕ್ಷೇತರ ಅಭ್ಯರ್ಥಿಗಳ ಸ್ಪರ್ಧೆ “ತಪ್ಲಿ ಭರ್ತಿ” ಎನ್ನುವಂತಾಗಿದೆ.ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಭಟ್ಕಳದ ಹೈಕೋರ್ಟ್ ವಕೀಲ ದತ್ತಾತ್ರೇಯ ನಾಯ್ಕ ಹೆಚ್ಚು ಮತ ಪಡೆದಂತೆಲ್ಲ ಬಿಜೆಪಿಗೆ ಹಿನ್ನಡೆಯಾಗಲಿದೆ. ಇನ್ನು ಜೆಡಿಎಸ್ ಜಿಲ್ಲೆಯಲ್ಲಿ ನಾಮಾವಶೇಷವಾಗಿರುವುದರಿಂದ ಈ ಪಕ್ಷಕ್ಕೆ ಅಭ್ಯರ್ಥಿ ಕೊರತೆಯೂ ಎದ್ದು ಕಾಣುತ್ತಿದೆ. ಭಟ್ಕಳದಲ್ಲಿ ಇನಾಯತುಲ್ಲಾ ಶಾಬಂದ್ರಿ, ಕುಮಟಾದಲ್ಲಿ ಸೂರಜ್ ನಾಯ್ಕ ಸೋನಿ, ಕಾರವಾರದಲ್ಲಿ ಆನಂದ ಅಸ್ನೋಟಿಕರ್ ಹಾಗೂ ಸಿದ್ಧಾಪುರದ ಶಶಿಭೂಷಣ ಹೆಗಡೆ ತಮ್ಮ ವೈಯಕ್ತಿಕ ವರ್ಚಸ್ಸಿನಿಂದ ಮತ ಸೆಳೆಯಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದಾರೆ. ಆದರೆ ಈ ಚುನಾವಣೆ ಜನಪ್ರತಿನಿಧಿಗಳ ಕ್ಷೇತ್ರಕ್ಕೆ ನಡೆಯುವುದರಿಂದ ಜೆಡಿಎಸ್ ನಿಂದ ಆಯ್ಕೆಗೊಂಡ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದೆ. ಹೀಗಾಗಿ ಜೆಡಿಎಸ್ ಅಭ್ಯರ್ಥಿ ಚುನಾವಣೆಯಲ್ಲಿ ಸ್ಪರ್ಧಿಸಿಲ್ಲ. ಜೆಡಿಎಸ್ ಎಂದರೆ ವ್ಯಕ್ತಿಯಾಧಾರಿತ ಪಕ್ಷವಾಗಿದೆ. ಜೆಡಿಎಸ್ ನ ಬಹುತೇಕ ನಾಯಕರು ಬಿಜೆಪಿಗೆ ವಿರುದ್ಧವಾಗಿದ್ದು, ರಾಜ್ಯ ಜೆಡಿಎಸ್ ನಾಯಕರು ಪರಿಷತ್ ಚುನಾವಣಾ ವಿಚಾರದಲ್ಲಿ ಏನೇ ನಿರ್ಧಾರ ತೆಗೆದುಕೊಂಡರೂ ಜಿಲ್ಲಾ ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಅವರನ್ನು ಬೆಂಬಲಿಸುವುದು ಖಚಿತ ಎನ್ನಲಾಗುತ್ತಿದೆ.
ಕಾಂಗ್ರೆಸ್ V/S ಬಿಜೆಪಿ
ಬಿಜೆಪಿ ಅಭ್ಯರ್ಥಿ ಗಣಪತಿ ಉಳ್ವೇಕರ್ ರೌಡಿಸಂ ಹಿನ್ನೆಲೆಯಿಂದ ಬಂದವರು. ಉಳ್ವೇಕರ್ ನೇರವಾಗಿ ಮತ ಪ್ರಚಾರಕ್ಕಿಳಿದರೆ ಇವರ ಗಂಟು ಮೋರೆಗೆ ಇಡಗಂಟು ಉಳಿಯಲಿಕ್ಕಿಲ್ಲ ಎಂದು ಸ್ವತಃ ಬಿಜೆಪಿ ಕಾರ್ಯಕರ್ತರೇ ವ್ಯಂಗ್ಯವಾಡುತ್ತಿದ್ದಾರೆ. ಜಿಲ್ಲೆಯ ಐವರು ಬಿಜೆಪಿ ಶಾಸಕರನ್ನು ನಂಬಿ ಉಳ್ವೇಕರ್ ಕುಳಿತುಕೊಳ್ಳುವಂತಾಗಿದೆ.ಕನ್ನಡವೇ ಸ್ಪಷ್ಟವಾಗಿ ಮಾತನಾಡಲು ಬಾರದ ಉಳ್ವೇಕರ್ ಚಿಂತಕರ ಚಾವಡಿ ಎಂದು ಕರೆಯಲ್ಪಡುವ ವಿಧಾನ ಪರಿಷತ್ತಿಗೆ ಹೋಗಿ ಏನು ಮಾಡುತ್ತಾರೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಈಗಾಗಲೇ ಅನಂತಕುಮಾರ ಹೆಗಡೆ ತಾವು ಸೂಚಿಸಿದ ಅಭ್ಯರ್ಥಿಗೆ ಬಿಜೆಪಿ ಟಿಕೆಟ್ ಸಿಗದ ಕಾರಣಕ್ಕೆ ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದು, ಇದು ಕಾಂಗ್ರೆಸ್ ನ ಭೀಮಣ್ಣ ನಾಯ್ಕ ಅವರಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಕೈ ಬಾಯಿ ಶುದ್ಧವಾಗಿಟ್ಟುಕೊಂಡಿರುವ ಸಜ್ಜನ ರಾಜಕಾರಣಿ ಭೀಮಣ್ಣ ನಾಯ್ಕ ಮೂರು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ವಿಚಲಿತರಾಗದೇ ಹನ್ನೆರಡು ವರ್ಷಗಳ ಕಾಲ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರಾಗಿ ಕಾರ್ಯಕರ್ತರನ್ನು ಬಹು ಪ್ರೀತಿಯಿಂದ ಕಂಡವರು. ಇವರ ನಿರರ್ಗಳ ಮಾತು ಮತ್ತು ಪಕ್ಷ ನಿಷ್ಠೆ ಕಾರ್ಯಕರ್ತರನ್ನು ಹುರಿದುಂಬಿಸುತ್ತಿದೆ. ಕ್ಷೇತ್ರದಲ್ಲಿ ಪಕ್ಷಕ್ಕಿಂತ ಅಭ್ಯರ್ಥಿಗಳ ವೈಯಕ್ತಿಕ ವರ್ಚಸ್ಸು ಹೆಚ್ಚು ಕೆಲಸ ಮಾಡಲಿದೆ.
ಕ್ಷೇತ್ರ ವಿಧಾನಸಭಾವಾರು ನೋಡುವುದಾದರೆ ಕಾರವಾರದಲ್ಲಿ ಹಾಲಿ ಶಾಸಕಿಯಾಗಿ ರೂಪಾಲಿ ನಾಯ್ಕ ಇದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ, ಕೆ.ಎಫ್.ಡಿ.ಸಿ ಮಾಜಿ ಅಧ್ಯಕ್ಷ ಅಂಕೋಲೆಯ ರಾಜೇಂದ್ರ ನಾಯ್ಕ ಅವರು ಪಕ್ಷದ ಟಿಕೆಟ್ ಸಿಗದೇ ಮುನಿಸಿಕೊಂಡು ಬಿಜೆಪಿ ಸೇರಿ ರೂಪಾಲಿ ನಾಯ್ಕ ಅವರನ್ನು ಬೆಂಬಲಿಸಿದ್ದರಿಂದ ರೂಪಾಲಿ ಅವರು ಶಾಸಕ ಪಟ್ಟ ಅಲಂಕರಿಸುವಂತಾಯಿತು. ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸತೀಶ್ ಸೈಲ್ ಹಾಗೂ ಜೆಡಿಎಸ್ ನ ಆನಂದ ಅಸ್ನೋಟಿಕರ್ ಇವರಿಬ್ಬರ ಪ್ರಭಾವವು ಕ್ಷೇತ್ರದಲ್ಲಿ ಹೆಚ್ಚಿಗೆ ಇರುವುದರಿಂದ ಸಹಜವಾಗಿಯೇ ಕಾಂಗ್ರೆಸ್ ನ ಮತಗಳಿಕೆ ಪ್ರಮಾಣ ಹೆಚ್ಚಿಗೆ ಆಗಬಹುದೆಂಬ ನಿರೀಕ್ಷೆ ಇದೆ. ಅಂಕೋಲೆಯಲ್ಲಿ ರೂಪಾಲಿ ನಾಯ್ಕ ಅವರ ಪ್ರಭಾವ ಅಷ್ಟಕ್ಕಷ್ಟೆ ಇರುವುದರಿಂದ ಇಲ್ಲೂ ಬಿಜೆಪಿಗೆ ಹಿನ್ನಡೆ ಎಂದೇ ಹೇಳಲಾಗುತ್ತಿದೆ.
ಇನ್ನು ಕುಮಟಾ ಕ್ಷೇತ್ರದಲ್ಲಿ ಪಕ್ಷಾಂತರಿ ಪ್ರವೀಣನೆಂದೇ ಖ್ಯಾತಿಯಾಗಿರುವ ದಿನಕರ ಶೆಟ್ಟಿ ಶಾಸಕರಾಗಿದ್ದಾರೆ.ಇವರಿಗೆ ಸಂಘಪರಿವಾರ ಮತ್ತು ಮೂಲ ಬಿಜೆಪಿಗರು ಕತ್ತಿ ಮಸೆಯುತ್ತಿದ್ದಾರೆ. ಯುವಕ ಪರೇಶ್ ಮೇಸ್ತನ ಸಂಶಯಾಸ್ಪದ ಸಾವಿನ ಪ್ರಕರಣದಿಂದಾದ ಗಲಭೆಯ ಅನುಕಂಪದಿಂದಾಗಿ ದಿನಕರ ಶೆಟ್ಟಿ ಶಾಸಕರಾಗಿದ್ದಾರೆ. ಶಾಸಕ ಶೆಟ್ಟಿಯ ಗುಂಪುಗಾರಿಕೆ ಮತ್ತು ಸ್ವಜನ ಪಕ್ಷಪಾತ ಬಿಜೆಪಿಯ ಮೂಲ ಕಾರ್ಯಕರ್ತರಲ್ಲಿ ಅಸಮಾಧಾನ ಬುಗಿಲೇಳಲು ಕಾರಣ ಎನ್ನಲಾಗಿದೆ. ಇನ್ನು ಕುಮಟಾ ವಿಧಾನಸಭಾ ಕ್ಷೇತ್ರದಲ್ಲಿ ಮಕಾಡೆ ಮಲಗಿದ್ದ ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ನ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ವರ್ಚಸ್ವಿ ನಾಯಕ ಪ್ರದೀಪ್ ನಾಯಕ ಅವರ ಕಾಂಗ್ರೆಸ್ ಸೇರ್ಪಡೆಯಿಂದ ಭೀಮ ಬಲ ಬಂದಂತಾಗಿದೆ. ಸಂಘಟನಾ ಚತುರ ಪ್ರದೀಪ್ ನಾಯಕ ಅವರ ಸಂಘಟನೆಯಿಂದ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷವು ಪುನಶ್ಚೇತನಗೊಳ್ಳುತ್ತಿದೆ.
ಶಾಸಕ ದಿನಕರ ಶೆಟ್ಟಿ ಹೊನ್ನಾವರದಲ್ಲಿಯೂ ತಮ್ಮ ಅಸ್ತಿತ್ವವನ್ನು ಕಳೆದುಕೊಂಡಿದ್ದಾರೆ.ಇಲ್ಲಿರುವ ಹೆಚ್ಚಿನ ಬಿಜೆಪಿ ಬೆಂಬಲಿತ ಸದಸ್ಯರು ದಿನಕರ ಶೆಟ್ಟಿ ಮೇಲಿನ ಆಕ್ರೋಶಕ್ಕೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಭೀಮಣ್ಣನವರ ಪರ ಮತ ಚಲಾಯಿಸುವ ಸಾಧ್ಯತೆ ಇದೆ.ಇನ್ನು ಭಟ್ಕಳ ಕ್ಷೇತ್ರದ ಶಾಸಕ ಸುನೀಲ್ ನಾಯ್ಕ ಪಕ್ಷ ಸಂಘಟನೆಯನ್ನು ಬಿಟ್ಟು ಗುಂಪುಗಾರಿಕೆಯಲ್ಲಿ ಮಗ್ನರಾಗಿದ್ದಾರೆ. ತಮಗಾಗದವರನ್ನು ಹೆಡೆಮುರಿಕಟ್ಟಲು ಯತೇಚ್ಛವಾಗಿ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆಂಬ ಆರೋಪ ಸುನೀಲ್ ನಾಯ್ಕ ಅವರ ಮೇಲಿದೆ. ಈ ಹಿನ್ನೆಲೆಯಲ್ಲಿ ಇವರನ್ನು ಸಂಘ ಪರಿವಾರ ಮತ್ತು ಮೂಲ ಬಿಜೆಪಿಗರು ವಿರೋಧಿಸುತ್ತಿದ್ದಾರೆ. ಮಾಜಿ ಶಾಸಕ ಮಂಕಾಳ ವೈದ್ಯರ ಹಿಡಿತದಲ್ಲಿರುವ ಕಾಂಗ್ರೆಸ್ ಪಕ್ಷದಿಂದ ಹೆಚ್ಚಿನ ಗ್ರಾಮ ಪಂಚಾಯತ್ ಸದಸ್ಯರು ಗೆಲ್ಲಲು ಸಹಕಾರಿಯಾಗಿದೆ. ಭಟ್ಕಳ ಪುರಸಭೆ ತಂಜೀಮ್ ಹಿಡಿತದಲ್ಲಿರುವುದರಿಂದ ಇಲ್ಲಿ ಸುನೀಲ್ ನಾಯ್ಕ ಅವರ ಆಟ ನಡೆಯಲಾರದೆಂದು ಬಿಜೆಪಿ ಕಾರ್ಯಕರ್ತರೇ ಬಹಿರಂಗವಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. ಸುನೀಲ್ ನಾಯ್ಕ ಅವರ ದ್ವೇಷದ ರಾಜಕಾರಣ ಗಣಪತಿ ಉಳ್ವೇಕರ್ ಅವರಿಗೆ ಮುಳುವಾಗುವ ಸಾಧ್ಯತೆ ಹೆಚ್ಚಿದೆ.
ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪ್ರತಿನಿಧಿಸುವ ಶಿರಸಿ – ಸಿದ್ಧಾಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಬೇರೊಬ್ಬರನ್ನು ಬೆಳೆಯಲು ಬಿಡಲಿಲ್ಲವೆಂಬ ಆರೋಪ ಕಾಗೇರಿಯವರ ಮೇಲಿದೆ. ಇಲ್ಲೂ ಬಿಜೆಪಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಹಿನ್ನಡೆಯಾಗಲಿದೆ. ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕರ ಪ್ರಭಾವ ಹೆಚ್ಚಿಗೆ ಇರುವುದರಿಂದ ಅನುಕಂಪದ ಅಲೆಯೂ ಹೇರಳವಾಗಿದೆ. ಈ ಅನುಕಂಪ ಅದೆಷ್ಟರ ಮಟ್ಟಿಗೆ ಮತದ ರೂಪದಲ್ಲಿ ಹರಿದು ಬರಲಿದೆ ಎಂಬುದು ಚುನಾವಣೆ ನಂತರವಷ್ಟೇ ತಿಳಿದು ಬರಬೇಕಿದೆ.
ಇನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್ ಪ್ರತಿನಿಧಿಸುವ ಯಲ್ಲಾಪುರ – ಮುಂಡಗೋಡ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಅತೀ ಹೆಚ್ಚು ಮತಗಳು ಹರಿದು ಬಂದರೂ ದೇಶಪಾಂಡೆ ಹಿಡಿತದಲ್ಲಿರುವ ಮುಂಡಗೋಡ ಭಾಗದಲ್ಲಿ ಬಿಜೆಪಿ ಮತಗಳ ನಾಗಾಲೋಟಕ್ಕೆ ಕಡಿವಾಣ ಬೀಳಲಿದೆ. ಆರ್.ವಿ.ದೇಶಪಾಂಡೆ ಪ್ರತಿನಿಧಿಸುವ ಹಳಿಯಾಳ – ಜೋಯಿಡಾ ವಿಧಾನಸಭಾ ಕ್ಷೇತ್ರದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಿಂದ ಆಯ್ಕೆಯಾದವರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.ಇದು ಭೀಮಣ್ಣನವರ ಭೀಮ ಬಲ ಹೆಚ್ಚಲು ಕಾರಣವೆಂದು ಹೇಳಲಾಗುತ್ತಿದೆ.
ಸಾಮಾನ್ಯವಾಗಿ ವಿಧಾನ ಪರಿಷತ್ ಚುನಾವಣೆಯಲ್ಲಿ ಅತೀ ಹೆಚ್ಚು ಹಣ ಚಲಾವಣೆಯಾಗುತ್ತದೆ. ಬಿಜೆಪಿ ದುಡ್ಡು ಹಂಚುವುದರಲ್ಲಿ ಮತ್ತು ಭೃಷ್ಠಾಚಾರ ನಡೆಸುವುದರಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ ಇದೆ. ತಮ್ಮ ಪಕ್ಷದ ಬೆಂಬಲದಿಂದ ಆಯ್ಕೆಗೊಂಡ ಸದಸ್ಯರಿಗೆ ಬಿಜೆಪಿ 25 ಸಾವಿರ ರೂ. ನಿಗದಿಪಡಿಸಿದ್ದರೆ,ಕಾಂಗ್ರೆಸ್, ಜೆಡಿಎಸ್ ಹಾಗೂ ಪಕ್ಷೇತರ ಸದಸ್ಯರು ಕ್ರಾಸ್ ಓಟಿಂಗ್ ಮಾಡುವುದಾದರೆ ಅವರಿಗೆ 50 ರಿಂದ 60 ಸಾವಿರ ರೂ.ಹಣ ಹಂಚಲು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಒಟ್ಟು 2914 ಮತದಾರರಿರುವ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳಲ್ಲಿ ನೇರ ಹಣಾಹಣಿ ನಡೆಯಲಿದೆ. ಯಾರು ಗೆಲುವಿನ ದಡ ಸೇರಲಿದ್ದಾರೆಂಬುದು ಚುನಾವಣೆ ನಂತರವಷ್ಟೇ ತಿಳಿದು ಬರಲಿದೆ.




