ವಿಶ್ವನಾಥ್ ಕೊಲೆಗೆ ಸಂಚು ರೂಪಿಸಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು: ಸಚಿವ ಭೈರತಿ ಬಸವರಾಜ್

ದಾವಣಗೆರೆ: ಶಾಸಕ ಎಸ್. ಆರ್. ವಿಶ್ವನಾಥ್ ಅವರ ಹತ್ಯೆಗೆ ಸ್ಕೆಚ್ ರೂಪಿಸಿದ್ದ ಬಗ್ಗೆ ತನಿಖೆ ಬಳಿಕ ಸತ್ಯಾಸತ್ಯತೆ ಹೊರಬರಲಿದೆ. ಯಾರೇ ತಪ್ಪು ಮಾಡಿದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹೇಳಿದ್ದಾರೆ.
ಮಾಧ್ಯಮದವರ ಜೊತೆ ಮಾತನಾಡಿದ ಅವರು, ಈಗಾಗಲೇ ವಿಶ್ವನಾಥ್ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದಾರೆ. ಘಟನೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ತಂದಿದ್ದಾರೆ. ತನಿಖೆಗೆ ಆದೇಶಿಸಲಾಗಿದೆ. ಯಾರು ಈ ರೀತಿಯ ಹೇಯ ಕೃತ್ಯ ಮಾಡಲು ಹೊರಟಿದ್ದರೂ ಅವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ರೀತಿಯಾದ ಕೃತ್ಯಗಳು ನಿಜಕ್ಕೂ ಖಂಡನೀಯ. ಜನಪ್ರತಿನಿಧಿ ಮೇಲೆ ಹತ್ಯೆಗೆ ಸಂಚು ರೂಪಿಸುವಂಥದ್ದು ನಿಜವಾಗಿಯೂ ಸಾಮಾಜಿಕ ಒಳಿತಲ್ಲ ಎಂದು ಅಭಿಪ್ರಾಯಪಟ್ಟರು.
ಮುಂಬರುವ ದಿನಗಳಲ್ಲಿ ಈ ರೀತಿಯ ಘಟನೆಗಳು ಮರುಕಳಿಸಬಾರದು. ಈ ರೀತಿಯ ಕೃತ್ಯಕ್ಕೆ ಪ್ರೇರಣೆ ಕೊಡುವವರು ಯಾರೇ ಇದ್ದರೂ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಲ್ಲಿ ನಾನು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಬೆಳಗಾವಿಯಲ್ಲಿ ಪಕ್ಷೇತರರಾಗಿ ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಬಿಜೆಪಿಗೆ ಹಿನ್ನೆಡೆ ಆಗಲ್ಲ. ಅಲ್ಲಿ ಬಿಜೆಪಿ ಶಾಸಕರಿದ್ದಾರೆ. ಪ್ರಜ್ಞಾವಂತ ಮತದಾರರಿದ್ದಾರೆ. ಲಖನ್ ಜಾರಕಿಹೊಳಿ ಸ್ಪರ್ಧೆಯಿಂದ ಪಕ್ಷಕ್ಕೇನೂ ಹಾನಿಯಾಗುವುದಿಲ್ಲ. ನಮಗೆ ಮೊದಲ ಪ್ರಾಶಸ್ತ್ಯ ಮತವನ್ನು ನೀಡುವಂತೆ ಮಾಡಲು ಶ್ರಮಿಸುವುದಾಗಿ ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಎರಡನೇ ಪ್ರಾಶಸ್ತ್ಯ ಮತವನ್ನು ಏನು ಮಾಡುತ್ತಾರೋ ಗೊತ್ತಿಲ್ಲ. ಬಿಜೆಪಿ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯನವರ ಬಗ್ಗೆ ಹೆಚ್ಚು ಮಾತನಾಡಲು ಹೋಗಲ್ಲ. ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಜಿ. ಟಿ. ದೇವೇಗೌಡ ಅವರು ಕಾರ್ಯಕ್ರಮ ನಡೆಸಿದ್ದಾರೆ. ಜಿಟಿಡಿ ಕಾಂಗ್ರೆಸ್ ಸೇರುತ್ತಾರೋ ಇಲ್ಲವೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡೋಣ ಎಂದ ಅವರು, ಎ. ಮಂಜು ಬಿಜೆಪಿ ಪಕ್ಷ ಬಿಟ್ಟರೆ ಪಕ್ಷಕ್ಕೆ ಬೇಕಾದಷ್ಟು ಮಂದಿ ಇದ್ದಾರೆ. ಮೊದಲು ಕಾಂಗ್ರೆಸ್ ನಲ್ಲಿದ್ದರು, ಬಳಿಕ ಬಿಜೆಪಿಗೆ ಬಂದರು. ಅಧಿಕಾರಕ್ಕೋಸ್ಕರ ಪಕ್ಷ ಬದಲಾವಣೆ ಮಾಡಿದ್ದಾರೆ. ಅಧಿಕಾರಕ್ಕೋಸ್ಕರ ಪಕ್ಷ ಬಿಟ್ಟು ಹೋಗುವುದು ಉತ್ತಮವಾದ ಬೆಳವಣಿಗೆ ಅಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಉತ್ತಮ ಕೆಲಸ ಮಾಡುತ್ತಿದ್ದಾರೆ. ಈಗ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. 2023ರ ಚುನಾವಣೆಯ ಬಳಿಕ ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದಕ್ಕೆ ಬದ್ಧರಿದ್ದೇವೆ. ಸಚಿವ ಕೆ. ಎಸ್. ಈಶ್ವರಪ್ಪ ಅವರು ಮುರುಗೇಶ್ ನಿರಾಣಿ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಹೇಳಿಕೆ ನೀಡಿರುವುದು ಸರಿಯಲ್ಲ. ಸಿಎಂ ಬದಲಾವಣೆ ಎನ್ನುವ ವಿಚಾರವೇ ಅಸಂಬದ್ಧ. ಈ ರೀತಿಯ ಹೇಳಿಕೆ ಕೊಡುವುದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ. ಪಕ್ಷದಲ್ಲಿ ಗೊಂದಲ ಸೃಷ್ಟಿಸುವಂತೆ ಯಾರೂ ನಡೆದುಕೊಳ್ಳಬಾರದು ಎಂದು ಅಭಿಪ್ರಾಯಪಟ್ಟರು.



