ಮೇಲ್ಮನೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ನಿಶ್ಚಿತ: ಎಂಎಲ್ಸಿ ಬಿ ಕೆ ಹರಿಪ್ರಸಾದ್

ಧಾರವಾಡ : ಈ ಹಿಂದೆ ನಡೆದ ಹಾನಗಲ್ ಉಪ ಚುನಾವಣೆಯಲ್ಲಿ ಮತದಾರರು, ಜನ ಸಾಮಾನ್ಯರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸದ ಸರ್ಕಾರದ ವಿರುದ್ಧ ಮತ ನೀಡಿದ್ದಾರೆ. ಈಗಲೂ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಮತದಾರರು ಹೆಚ್ಚಿನ ಮತ ನೀಡಲಿದ್ದಾರೆ ಎಂದು ಪರಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಬಿಜೆಪಿ ಹಣ, ಅಧಿಕಾರ, ಪ್ರದರ್ಶನ ಮಾಡಿದೆ. ಈ ಚುನಾವಣೆಯಲ್ಲಿಯೂ ಗ್ರಾಮೀಣ ಮಟ್ಟದಲ್ಲಿ ಆಮಿಷಗಳನ್ನು ಒಡ್ಡುವ ಕಾಯಕದಲ್ಲಿ ಬಿಜೆಪಿಯವರು ತೊಡಗಿಕೊಂಡಿದ್ದಾರೆ. ರಾಜೀವ್ ಗಾಂಧಿ ಅವರು ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಕೊಡುವ ಕೆಲಸ ಮಾಡಿದ್ದಾರೆ. ಆ ಅಧಿಕಾರ ಉಳಿಸಲು ಹಾಗೂ ಪ್ರಜಾಪ್ರಭುತ್ವ ಮತ್ತು ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠಗೊಳಿಸಲು ಎಲ್ಲರೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೇಕೆಂದು ಅವರು ಮನವಿ ಮಾಡಿದರು.
ನಮ್ಮ ಪಕ್ಷದ ಧಾರವಾಡ ಅವಿಭಜಿತ ಅಭ್ಯರ್ಥಿಯಾದ ಸಲಿಂ ಅಹ್ಮದ್ ಅವರು ವಿದ್ಯಾರ್ಥಿ ದಿಶೆಯಿಂದಲೂ ನಾಯಕರಾಗಿದ್ದವರು. ಅವರೊಬ್ಬ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತ. ಅವರಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ ನೀಡಬೇಕು ಎಂಬುದು ನಮ್ಮ ಮನವಿಯಾಗಿದೆ ಎಂದು ಅವರು ಹೇಳಿದರು.
ರೈತರ ಬೇಡಿಕೆಗಳನ್ನು ಹತ್ತಿಕ್ಕಲು ಹುನ್ನಾರ ನಡೆದಿತ್ತಾದರೂ ಅದು ಸಾಧ್ಯವಾಗಲಿಲ್ಲ. ಹೀಗಾಗಿ ರೈತ ವಿರೋಧಿ ಕಾಯ್ದೆಗಳನ್ನು ವಾಪಸು ಪಡೆಯಲಾಗಿದೆ. ಅತಿವೃಷ್ಟಿಯಿಂದಾಗಿ ರೈತರು ಬೆಳೆದ ಬೆಳೆಗಳು ಸಂಪೂರ್ಣವಾಗಿ ನಾಶವಾಗಿವೆ ಸರ್ಕಾರದಲ್ಲಿ ಅಧಿಕಾರದಲ್ಲಿರುವ ಮಂತ್ರಿಗಳು ಪರಿಹಾರ ಕೊಡುವಲ್ಲಿ ಮೀನಾಮೇಷ ಎಣಿಸುತ್ತಿದ್ದಾರೆ. ರಾಷ್ಟ್ರದ ಬೆನ್ನಲುಬು ರೈತನ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕೆಂದು ಅವರು ಒತ್ತಾಯಿಸಿದರು.



