
ಮುಂಬೈ: ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಕುಳಿತಲ್ಲೇ ರಾಷ್ಟ್ರಗೀತೆ ಹಾಡಿ, ನಂತರ ಎದ್ದು ನಿಂತು ಅರ್ಧಕ್ಕೆ ನಿಲ್ಲಿಸಿ ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡರೋರ್ವರು ಪೊಲೀಸರಿಗೆ ದೂರು ನೀಡಿದ್ದಾರೆ.
ತೃಣಮೂಲ ಕಾಂಗ್ರೆಸ್ ವರಿಷ್ಠರು ವಾಣಿಜ್ಯ ನಗರಿಗೆ ಭೇಟಿ ನೀಡಿ ಶಿವಸೇನಾ ನಾಯಕರ ನಂತರ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸುದ್ದಿಗೋಷ್ಠಿ ನಡೆಸಿದ್ದರು.
ಈ ವೇಳೆ ಬ್ಯಾನರ್ಜಿ ರಾಷ್ಟ್ರಗೀತೆಗೆ ಸಂಪೂರ್ಣ ಅಗೌರವ ತೋರಿದ್ದಾರೆ. ಇದು ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆ ಕಾಯ್ದೆ 1971ರ ಅಡಿಯಲ್ಲಿ ಅಪರಾಧವಾಗಿದೆ ಎಂದು ವಿವೇಕಾನಂದ ಗುಪ್ತಾ ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಬಿಜೆಪಿ ನಾಯಕ ಪ್ರತೀಕ್ ಕರ್ಪೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಮುಂತಾದವರು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ರಾಷ್ಟ್ರಗೀತೆ ಹಾಡಿರುವ ಕ್ಲಿಪ್ ಅನ್ನು ಪಶ್ಚಿಮ ಬಂಗಾಳ ಬಿಜೆಪಿ ಘಟಕ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.



