ಭತ್ತ ಕಟಾವು ಯಂತ್ರಗಳಿಗೆ ಪರಷ್ಕೃತ ದರ ನಿಗದಿ; ಹೆಚ್ಚಿನ ಹಣ ಪಡೆದರೆ ಕ್ರಮದ ಎಚ್ಚರಿಕೆ

ದಾವಣಗೆರೆ: ಖಾಸಗಿ ಭತ್ತ ಕಟಾವು ಯಂತ್ರಗಳಿಗೆ ಪ್ರತಿ ಗಂಟೆಗೆ ಬೆಲ್ಟ್ ಅಥವಾ ಚೈನ್ ಟೈಪ್ ಯಂತ್ರಗಳಿಗೆ 2250 ಹಾಗೂ ಟೈರ್ ಟೈಪ್ ಭತ್ತ ಕಟಾವು ಯಂತ್ರಗಳಿಗೆ 1800 ರೂಪಾಯಿ ದರ ನಿಗದಿಪಡಿಸಲಾಗಿದೆ. ಹೆಚ್ಚಿನ ಹಣ ಕೇಳಿದರೆ ದೂರು ನೀಡುವಂತೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ರೈತರಲ್ಲಿ ಮನವಿ ಮಾಡಿದ್ದಾರೆ.
ದಾವಣಗೆರೆ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ 66,245 ಹೆಕ್ಟೇರು ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆದಿದ್ದು, ಸದ್ಯ ಭತ್ತದ ಬೆಳೆಯು ಬಹುತೇಕ ಕಾಳು ಬಲಿಯುವ ಹಂತದಿಂದ ಕಟಾವಿನ ಹಂತ ತಲುಪಿದ್ದು ಅಲ್ಲಲ್ಲಿ ಕಟಾವು ಆರಂಭವಾಗಿದೆ.
ರೈತರು ಭತ್ತದ ಬೆಳೆಯನ್ನು ಕಟಾವು ಯಂತ್ರಗಳ (Combined Harvesters) ಮೂಲಕ ಕಟಾವು ಮಾಡುತ್ತಿದ್ದು ತಮ್ಮ ಸಮೀಪದ ಕೃಷಿ ಯಂತ್ರಧಾರೆ ಕೇಂದ್ರಗಳಲ್ಲಿ ಲಭ್ಯವಿರುವ ಕಟಾವು ಯಂತ್ರಗಳ ಪ್ರಯೋಜನ ಪಡೆಯಬಹುದು
ಖಾಸಗಿ ಭತ್ತ ಕಟಾವು ಯಂತ್ರಗಳ ಮಾಲೀಕರು ಪ್ರತಿ ಗಂಟೆಗೆ 2800 ರಿಂದ 3800 ರೂಗಳವರಗೆ ಬಾಡಿಗೆ ಹಣ ನಿಗದಿಪಡಿಸುತ್ತಿರುವುದು ಗಮನಕ್ಕೆ ಬಂದಿದ್ದು ಇದರಿಂದ ರೈತರಿಗೆ ಹೆಚ್ಚಿನ ಆರ್ಥಿಕ ಹೊರೆ ಆಗಲಿದೆ. ಆದ್ದರಿಂದ ಪರಿಷ್ಕ್ರತ ನಿಗದಿಪಡಿಸಿರುವ ದರವನ್ನು ಬಾಡಿಗೆ ಭತ್ತ ಕಟಾವು ಯಂತ್ರಗಳ ಮಾಲೀಕರು ಪಡೆಯಬೇಕು. ತಪ್ಪಿದಲ್ಲಿ ಅಂತಹ ಮಾಲೀಕರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ 2005 ಪ್ರಕಾರ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಹೆಚ್ಚು ಹಣಕ್ಕೆ ಒತ್ತಾಯಿಸಿದರೆ ರೈತರು ಕೃಷಿ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.




