ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಗೂ ಬೆದರಿಕೆ ಇತ್ತು: ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಆರೋಪ

ಬಾಗಲಕೋಟೆ: ನಾನು ಈ ಹಿಂದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದೆ, ಎಂಬಿ ಪಾಟೀಲ್ ಸಹೋದರನಿಗೆ ಟಿಕೆಟ್ ಘೋಷಣೆ, ಎಸ್ ಆರ್ ಪಾಟೀಲ್ ಟಿಕೆಟ್ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಸಿಟ್ಟು ಹೆಚ್ಚಾಯಿತು. ಸ್ಥಳೀಯ ಸಂಸ್ಥೆ ಸದಸ್ಯರ ಹಕ್ಕಿಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವೆ ಎಂದು ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಕಳೆದ ವಿಧಾನಪರಿಷತ್ ಚುನಾವಣೆ ವೇಳೆ ನಾನು ಕಾಂಗ್ರೆಸ್ ಪಕ್ಷದ ಆಕಾಂಕ್ಷಿಯಾಗಿದ್ದೆ. ಆ ಬಳಿಕ ನಡೆದ ಉಪ ಚುನಾವಣೆಯಲ್ಲಿ ಎಂಬಿ ಪಾಟೀಲ್ ಸಹೋದರ ಸುನೀಲ್ ಗೌಡ ಪಾಟೀಲ್ ಅವರಿಗೆ ಟಿಕೆಟ್ ಕೊಟ್ಟಿದ್ದಕ್ಕೆ ನಾನು ವಿರೋಧಿಸಿದ್ದೆ. ಒಂದೇ ಮನೆತನದವರಿಗೆ ಟಿಕೆಟ್ ಕೊಟ್ಟರೆ ಉಳಿದ ಸಮಾಜದ ಮುಖಂಡರಿಗೆ ಅನ್ಯಾಯ ಆಗುತ್ತೆ ಎಂದು ನನ್ನ ರಾಜಕೀಯ ಗುರುಗಳಾದ ಸಿದ್ದರಾಮಯ್ಯರಿಗೆ ಹೇಳಿದ್ದೆ ಎಂದರು.
ಮುಂದೆ ನನಗೆ ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಾಡುವಾಗ ಎಂಬಿ ಪಾಟೀಲ್ ವಿರೋಧಿಸಿದರು. ಸೂಕ್ತ ಸ್ಥಾನಮಾನ ಸಿಗಲಿಲ್ಲ. ಈ ಬಾರಿ ನಾನು ಆಕಾಂಕ್ಷಿಯಾಗಿರಲಿಲ್ಲ. ಆದರೆ ಹಿರಿಯ ಮುಖಂಡ ಎಸ್ ಆರ್ ಪಾಟೀಲ್ ರಿಗೆ ಟಿಕೆಟ್ ಕೈತಪ್ಪಿತು. ಹೀಗಾಗಿ ನಾನು ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದೆ.
ನಾಮಪತ್ರ ಸಲ್ಲಿಸುವಾಗ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸದಸ್ಯರ ಅಭಿಪ್ರಾಯ ಪಡೆದು ಅವರ ಒತ್ತಾಯದಂತೆ ಸ್ಪರ್ಧಿಸಿರುವೆ. ಆದರೆ ನಾಮಪತ್ರ ವಾಪಸ್ ಪಡೆಯುವಂತೆ ಸಿದ್ದರಾಮಯ್ಯ, ಡಿಕೆಶಿ, ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೂರವಾಣಿ ಮೂಲಕ ನಾಮಪತ್ರ ವಾಪಸ್ ಪಡೆಯುವಂತೆ ಒತ್ತಡ ಹಾಕಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ವಾಪಸ್ ಪಡೆದರೆ ಸಂಜೆಯೊಳಗೆ ನಿಗಮ ಮಂಡಳಿ ಅಧ್ಯಕ್ಷ ನೇಮಕ ಮಾಡುವೆ ಎಂದರು.
ಆದರೆ ಸದಸ್ಯರ ಮಾತು ಕೊಟ್ಟು ಸ್ಪರ್ಧಿಸಿದ್ದೇನೆ ಹಾಗಾಗಿ ಯಾವುದೇ ಒತ್ತಡ ಮಣಿಯದೆ ಕಣದಲ್ಲಿ ಉಳಿದಿರುವೆ.ಜೊತೆಗೆ ನಾಮಪತ್ರ ವಾಪಸ್ ಪಡೆಯುವಂತೆ ಬೆದರಿಕೆ ಕರೆಗಳು ಬಂದಿವೆ ಎಂದು ಆರೋಪ ಮಾಡಿದರು.
ಇನ್ನು ಗ್ರಾಮ ಪಂಚಾಯಿತಿ ಸದಸ್ಯರು ತಾವೇ ಸ್ವತಃ ಪ್ರಚಾರ ಮಾಡುತ್ತಿದ್ದಾರೆ. ಪ್ರಚಾರ ನಾವೇ ಮಾಡಿ ತಮ್ಮ ಖರ್ಚಿಗೆ ಹಣ ಕೊಡುತ್ತೇವೆ ಎಂದು ಪ್ರೀತಿ ತೋರಿದ್ದಾರೆ. ಅವರ ಅಭಿಮಾನದಿಂದ ಗೆಲುವಿನ ವಿಶ್ವಾಸದಲ್ಲಿದ್ದೇನೆ. ಮುಂದೆ ಎರಡು ರಾಷ್ಟ್ರೀಯ ಪಕ್ಷಗಳು ದೊಡ್ಡ ಪಾಕೇಟ್ ಆಮಿಷಗೊಳಗಾಬೇಡಿ ಎಂದು ವಿನಂತಿಸಿದ್ದೇನೆ. ಕುಟುಂಬ ರಾಜಕಾರಣದ ವಿರುದ್ಧ ಹೋರಾಟವಿದೆ ಎಂದು ಪರೋಕ್ಷವಾಗಿ ಮಾಜಿ ಸಚಿವ ಎಂಬಿ ಪಾಟೀಲ್ ವಿರುದ್ಧ ಆರೋಪಿಸಿದರು.




