ಉತ್ತರ ಕನ್ನಡಜಿಲ್ಲಾ ಸುದ್ದಿ

ಕೋವಿಡ್ ಲಸಿಕೆ ಪಡೆಯದಿದ್ದರೆ ಬ್ಯಾಂಕ್ ಹಾಗೂ ಸಾರ್ವಜನಿಕ ಸಂಸ್ಥೆಗಳಿಗೆ ನಿರ್ಬಂಧ: ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್

ಕಾರವಾರ : ಉತ್ತರ ಕನ್ನಡ ‘ಜಿಲ್ಲೆಯಲ್ಲಿ 45,725 ಜನರು ಕೋವಿಡ್ ಲಸಿಕೆಯ ಒಂದನೆಯ ಡೋಸನ್ನು ಇದುವರೆಗೂ ಪಡೆದುಕೊಂಡಿಲ್ಲ. ಜಿಲ್ಲೆಯಲ್ಲಿ ಭಟ್ಕಳ ತಾಲೂಕಿನಲ್ಲಿ ಅತೀ ಹೆಚ್ಚು ಜನರು ಕೋವಿಡ್ ಲಸಿಕೆಯ ಮೊದಲ ಸುತ್ತನ್ನು ಸಹ ಪಡೆದಿಲ್ಲ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ತಿಳಿಸಿದ್ದಾರೆ.

ಗೂಗಲ್ ಮೀಟ್ ಮೂಲಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ನಗರ,ಪಟ್ಟಣ ಭಾಗದಲ್ಲಿ 20,298 ಮಂದಿ,ಗ್ರಾಮೀಣ ಭಾಗದಲ್ಲಿ 25,427 ಜನರು ಲಸಿಕೆ ಪ‍ಡೆದಿಲ್ಲ.ಸಾರ್ವಜನಿಕರು ಸ್ಪಂದಿಸದಿದ್ದರೆ ಅವರನ್ನು ಎಚ್ಚರಿಸುವ ಕ್ರಮದ ಭಾಗವಾಗಿ ಸಹಕಾರ ಸಂಸ್ಥೆಗಳು, ಬ್ಯಾಂಕ್ ಮೊದಲಾದ ಸಾರ್ವಜನಿಕ ವ್ಯವಹಾರ ಸ್ಥಳಗಳಿಗೆ ಭೇಟಿ ನೀಡುವವರನ್ನು ಲಸಿಕೆ ಪಡೆದುಕೊಂಡಿರುವ ಬಗ್ಗೆ ವಿಚಾರಿಸಲು ಸೂಚಿಸಲಾಗಿದೆ. ಆಯಾ ಸಂಸ್ಥೆಗಳಿಗೆ ಅವರ ಪ್ರವೇಶವನ್ನು ನಿಷೇಧಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದೆ ಎಂದು ಎಚ್ಚರಿಕೆ ನೀಡಿದರು.

ಸಾರ್ವಜನಿಕ ಸ್ಥಳಗಳಲ್ಲಿ ಕಾರ್ಯ ನಿರ್ವಹಿಸುವವರನ್ನು ಪ್ರತಿ 15 ದಿನಗಳಿಗೊಮ್ಮೆ ಕೋವಿಡ್ ಪರೀಕ್ಷೆಗೆ ಒಳಪಡಿಸಲು ಸೂಚಿಸಲಾಗುವುದು. ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ವಿವಿಧ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗುವುದು. ಸೋಂಕಿನ ಪ್ರಕರಣಗಳು ವಿವಿಧ ಜಿಲ್ಲೆಗಳಲ್ಲಿ ಹೆಚ್ಚುತ್ತಿದ್ದು, ಉತ್ತರ ಕನ್ನಡದಲ್ಲಿ ಕೋವಿಡ್ ಹರಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ಕ್ರಮಗಳನ್ನು ಜಾರಿ ಮಾಡಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ 10.78 ಲಕ್ಷ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯಿದೆ.9.97 ಲಕ್ಷ ಮಂದಿ (ಶೇ 93ರಷ್ಟು) ಮೊದಲ ಡೋಸ್ ಪಡೆದಿದ್ದಾರೆ.6.66 ಲಕ್ಷ ಜನ (ಶೇ 67ರಷ್ಟು) ಎರಡನೇ ಡೋಸ್ ಹಾಕಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಕೋವಿಡ್ ಲಸಿಕೆ ಪಡೆದವರ ಕುರಿತು ಮತದಾರರ ಪಟ್ಟಿಯನ್ನು ಆಧಾರವಾಗಿಟ್ಟುಕೊಂಡು ಸಮೀಕ್ಷೆ ಮಾಡಲಾಗಿದೆ. ಈ ರೀತಿ ಎರಡು ಬಾರಿ ಖಚಿತ ಪಡಿಸಿಕೊಳ್ಳಲಾಗಿದೆ ಎಂದರು.

ಪ್ರತಿಯೊಬ್ಬ ನಾಗರಿಕನಿಗೂ ಲಸಿಕೆ ನೀಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಲಸಿಕೆ ಪಡೆಯದವರ ಪಟ್ಟಿಯನ್ನು ಆರೋಗ್ಯ ಉಪ ಕೇಂದ್ರವಾರು ಸಿದ್ಧಪಡಿಸಲಾಗಿದೆ. ಜಿಲ್ಲೆಯಲ್ಲಿ 334 ಆರೋಗ್ಯ ಉಪ ಕೇಂದ್ರಗಳಿವೆ. ಅವುಗಳ ಪೈಕಿ 107 ಕೇಂದ್ರಗಳಲ್ಲಿ ಲಸಿಕೆಯ ಒಂದೂ ಡೋಸ್ ಪಡೆಯದ ತಲಾ 100 ಕ್ಕಿಂತ ಹೆಚ್ಚು ಜನರಿದ್ದಾರೆ. ಅಂತಹ ಪ್ರದೇಶಗಳಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಮನೆ, ಮನೆಗೆ ಕಳುಹಿಸಿ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.

Spread the love

Related Articles

Leave a Reply

Your email address will not be published. Required fields are marked *

Back to top button