ಬಾಗಲಕೋಟೆ: ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗೆ ಕೊಳೆರೋಗ, ಅಪಾರ ಹಾನಿ

ಬಾಗಲಕೋಟೆ: ಅಕಾಲಿಕ ಮಳೆಯಿಂದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಬೆಳೆಯಲಾದ ದ್ರಾಕ್ಷಿ ಬೆಳೆಗೆ ಕೊಳೆ ರೋಗ ಬಂದು ಅಪಾರ ಪ್ರಮಾಣದಲ್ಲಿ ಹಾನಿಯಾಗಿದೆ.
ರೈತರು ಪ್ರತಿದಿನ 20 ಸಾವಿರವರೆಗೆ ಖರ್ಚುಮಾಡಿ ಔಷಧ ಸಿಂಪರಣೆ ಮಾಡುತಿದ್ದಾರೆ ಮೊದಲೇ ದ್ರಾಕ್ಷಿ ಬೆಳೆಗಾರರೆಂದರೆ ಸಾಲಗಾರರು ಎಂಬ ಹಣೆಪಟ್ಟಿ ಇದೆ. ಇವೆಲ್ಲದರ ನಡುವೆ ಈಗ ಸತತವಾಗಿ ಸುರಿದ ಅಕಾಲಿಕ ಮಳೆಯಿಂದ ದ್ರಾಕ್ಷಿ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಾಗಲಕೋಟೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಾದ ಎಸ್ ಜಿ ಗೊಳ್ಳಗಿ ನೇತೃತ್ವದ ತಂಡ ಸಮಗ್ರ ಸಮೀಕ್ಷೆ ಮಾಡದೇ ಕೇವಲ ಎರಡು ಬೆಳೆಗಳಿಗೆ ಸಾಂಕೇತಿಕವಾಗಿ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿ ನಂತರ ಕಂದಾಯ ಇಲಾಖೆಯೊಂದಿಗೆ ಜಂಟಿ ಸಮೀಕ್ಷೆ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಹೇಳಿದ್ದಾರೆ.
ದ್ರಾಕ್ಷಿ ಬೆಳೆಯ ಹಾನಿಗೊಳಗಾದ ರೈತರು ಸಮೀಕ್ಷೆಯನ್ನು ವಿಳಂಭಗೊಳಿಸದೇ ಶೀಘ್ರವಾಗಿ ಬೆಳೆಯ ಸಮಗ್ರ ಸಮೀಕ್ಷೆ ಮಾಡಿ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು ಮತ್ತು ವಿಮಾ ಕಂಪನಿಗಳಿಗೆ ದ್ರಾಕ್ಷಿ ಬೆಳೆಗಾರರು ತುಂಬಿರುವ ವಿಮೆಯನ್ನು ಈಗ ಹಾನಿಗೊಳಗಾದ ರೈತರಿಗೆ ವಿಮಾ ಕಂಪನಿಯವರು ತಕ್ಷಣವೇ ವಿಮಾ ಪರಿಹಾರ ಮೊತ್ತವನ್ನು ನೀಡಬೇಕೆಂದು ದ್ರಾಕ್ಷಿ ಬೆಳೆಗಾರರು ಆಗ್ರಹಿಸಿದ್ದಾರೆ




