ಶಿರಸಿಯಲ್ಲಿ ಗಾಂಜಾ ಪ್ರಕರಣ : ವೈದ್ಯಕೀಯ ಪರೀಕ್ಷೆಯಲ್ಲಿ ಬಯಲಾಯ್ತು 12 ಯುವಕರ ಗುಟ್ಟು

ಕಾರವಾರ : ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ ಎರಡು ದಿನದ ಹಿಂದೆ ನಗರದ ವಿವಿಧ ಭಾಗದಲ್ಲಿ ದಾಳಿ ನಡೆಸಿ 15 ಜನರನ್ನು ವಶಕ್ಕೆ ಪಡೆದ ಶಿರಸಿ ಪೊಲೀಸರು ವೈದ್ಯಕೀಯ ವಿಜ್ಞಾನ ಪರೀಕ್ಷೆಗೆ ಒಳಪಡಿಸಿದ್ದು, 12 ಜನರು ಗಾಂಜಾ ಸೇವನೆ ಮಾಡಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢವಾಗಿದೆ.
ಗಾಂಜಾ ಸೇವನೆ ಮತ್ತು ಪೆಡ್ಲರ್ ಪ್ರಕರಣ ಸಂಬಂಧ ಶಿರಸಿ ಮಾರುಕಟ್ಟೆ ಪೊಲೀಸರು ದಾಳಿ ಮಾಡಿ 15 ಜನರನ್ನು ವೈದ್ಯಕೀಯ ತಪಾಸಣೆಗೆ ಉಡುಪಿಯ ಮಣಿಪಾಲ ಆಸ್ಪತ್ರೆಗೆ ಕಳಿಸಿಕೊಟ್ಟಿದ್ದರು. ಇದೀಗ 12 ಜನರ ಸೇವನೆ ಬಗ್ಗೆ ದೃಢಪಟ್ಟಿರುವುದು,ಶಿರಸಿಯಲ್ಲಿ ಗಾಂಜಾ ಸೇವನೆ ಪ್ರಕರಣ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ ಮೂರು ತಿಂಗಳಿಂದ ಶಿರಸಿ ಶಾಲಾ, ಕಾಲೇಜುಗಳ ಕ್ರೀಡಾಂಗಣ, ಬಸ್ ನಿಲ್ದಾಣಗಳಲ್ಲಿ ಗಾಂಜಾ ಮಾರಾಟ ಮಾಡುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಹಲವರನ್ನು ಬಂಧಿಸಿದ್ದರು. ಶಾಲಾ, ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಗಾಂಜಾ ಮತ್ತಿನ ದಾಸರಾಗಿದ್ದರು.
ಈ ಪ್ರಕರಣವನ್ನು ಶಿರಸಿ ಪೊಲೀಸರು ಗಂಭೀರವಾಗಿ ತೆಗೆದುಕೊಂಡು ಎರಡು ದಿನದ ಹಿಂದೆ ಬೆಳಂಬೆಳಗ್ಗೆ ಕಾರ್ಯಾಚರಣೆ ನಡೆಸಿದ್ದರು. ಇದರಿಂದಾಗಿ ಇದೀಗ ಶಿರಸಿ ಪಟ್ಟಣದಲ್ಲಿ ಗಾಂಜಾ ಮಾರಾಟ, ಸೇದುವ ಜನರಲ್ಲಿ ಭಯ ಮೂಡಿದೆ. ಶಿರಸಿಯಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಗೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.




