ಕಳಪೆ ಕಾಮಗಾರಿಯಿಂದ ಹಳ್ಳದಂತಾಗಿರುವ ಒಳಚರಂಡಿ: ಮೀನು ಹಿಡಿದು ಜೆಡಿಯು ಪ್ರತಿಭಟನೆ

ಚಿಕ್ಕಮಗಳೂರು: ನಗರ ವ್ಯಾಪ್ತಿಯ ಉಪ್ಪಳ್ಳಿ ಸರ್ಕಲ್ ನಲ್ಲಿ ಒಳಚರಂಡಿ ನೀರು ಹೊರಬರುತ್ತಾ ಹಳ್ಳದಂತಾಗಿರುವ ರಸ್ತೆಯಲ್ಲಿ ಗಾಳ ಹಾಕಿ ಮೀನು ಹಿಡಿಯುವಂತೆ ಅಣಕ ಮಾಡುವ ಮೂಲಕ ಜೆಡಿಯು ಪಕ್ಷ ವಿನೂತನ ಪ್ರತಿಭಟನೆ ನಡೆಸಿತು.
ಜೆಡಿಯು ಮಾಜಿ ಅಧ್ಯಕ್ಷ ಕೆ ಭರತ್ ಮಾತನಾಡಿ, ನಗರದೆಲ್ಲೆಡೆ ರಸ್ತೆಗಳು ಗುಂಡಿಮಯವಾಗಿದ್ದು, ವಾರಕ್ಕೆ 2-3 ಅಪಘಾತಗಳು ಸಂಭವಿಸುತ್ತಿವೆ. ಯುಜಿಡಿ ಕಳಪೆ ಕಾಮಗಾರಿಯಿಂದ ರಸ್ತೆಗಳೂ ಹಾಳಾಗುತ್ತಿವೆ. ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು ಕೈಕಟ್ಟಿ ಕುಳಿತಿದ್ದಾರೆ. ಸುಮಾರು 13 ವರ್ಷಗಳು ಕಳೆದರೂ ಸೂಕ್ತ ಕಾಮಗಾರಿ ನಿರ್ವಹಣೆ ಮಾಡದೆ ಇರುವುದು ಉಪ್ಪಳ್ಳಿಯ ಸಮಸ್ಯೆಯೇ ಸಾಕ್ಷಿಯಾಗಿದೆ ಎಂದು ದೂರಿದರು.
ಅಮೃತ್ ಯೋಜನೆಯಡಿ ರಸ್ತೆ ಸೇರಿದಂತೆ ಅನೇಕ ಕಾಮಗಾರಿಗಳು ಸಮರ್ಪಕವಾಗಿ ನಡೆದಿಲ್ಲ. ರಸ್ತೆ ಡಾಂಬರೀಕರಣದ ನಂತರ ಮತ್ತೆ ಅಗೆಯುವ ಮೂಲಕ ಕಾಮಗಾರಿಯನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸುತ್ತಿಲ್ಲ. ಇದರಿಂದ ದಿನನಿತ್ಯ ಸಂಚರಿಸುವ ನಾಗರೀಕರಿಗೆ ತೀವ್ರ ತೊಂದರೆಯಾಗಿದೆ.
ಗುಣಮಟ್ಟದ ಕಾಮಗಾರಿ ನಿರ್ವಹಣೆ ಮಾಡುವವರೆಗೆ ಜೆಡಿಯು ಪಕ್ಷದಿಂದ ನಿರಂತರವಾಗಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಉಪ್ಪಳ್ಳಿ ಯುವಕರ ಬಳದವರು ಪ್ರತಿಭಟನೆಗೆ ಸಾಥ್ ನೀಡಿದ್ದರು.




