ಚಿಕ್ಕಮಗಳೂರುಜಿಲ್ಲಾ ಸುದ್ದಿರಾಜಕೀಯ

ಎಂಎಲ್ಸಿ ಚುನಾವಣೆ: ಕಾಂಗ್ರೆಸ್ – ಬಿಜೆಪಿ ಅಭ್ಯರ್ಥಿಗಳು ಅಖಾಡಕ್ಕೆ: ಜೆಡಿಎಸ್ ನಡೆ ನಿಗೂಢ!

ಚಿಕ್ಕಮಗಳೂರು: ಸ್ಥಳೀಯ ಸಂಸ್ಥೆಗಳ ಸದಸ್ಯರಿಂದ ಆಯ್ಕೆ ಮಾಡಲಾಗುವ ವಿಧಾನ ಪರಿಷತ್ತಿನ 1 ಸ್ಥಾನಕ್ಕೆ ಡಿ.10 ರಂದು ನಡೆಯಲಿರುವ ಚುನಾವಣೆಗೆ ಅಖಾಡ ಸಜ್ಜಾಗುತ್ತಿದೆ.

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳು ಘೋಷಿಸಲ್ಪಟ್ಟಿದ್ದು, ಕಾಂಗ್ರೆಸ್ ಅಭ್ಯರ್ಥಿಯಾಗಿ ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿಯಿಂದ ಹಾಲಿ ಸದಸ್ಯ (ಉಪಸಭಾಪತಿ) ಎಂ ಕೆ ಪ್ರಾಣೇಶ್ ಅವರೇ ಅಭ್ಯರ್ಥಿಯಾಗಿದ್ದು, ನ.23ರಂದು ನಾಮಪತ್ರ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಆದರೆ ಜೆಡಿಎಸ್ ಪಕ್ಷದಿಂದ ಈವರೆಗೂ ಯಾರನ್ನೂ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿಲ್ಲ. ಒಂದುವೇಳೆ ಅಭ್ಯರ್ಥಿ ಹಾಕದಿದ್ದರ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲ ಎಂಬುದನ್ನೂ ಬಹಿರಂಗಪಡಿಸದೆ ಜೆಡಿಎಸ್ ನಡೆ ನಿಗೂಢವಾಗಿದೆ. ನಾಮಪತ್ರ ಸಲ್ಲಿಕೆಗೆ ಇನ್ನೆರಡೇ ದಿನ ಬಾಕಿ ಉಳಿದಿದ್ದು, ಅಷ್ಟರೊಳಗೆ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಘೋಷಿಸಲೂಬಹುದು.

ಕಳೆದ 2015ರಲ್ಲಿ ನಡೆದ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗಾಯತ್ರಿ ಶಾಂತೇಗೌಡ ಹಾಗೂ ಜೆಡಿಎಸ್ ಅಭ್ಯರ್ಥಿ ರಂಜನ್ ಅಜಿತ್ ಮಾರ್ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಎಂ ಕೆ ಪ್ರಾಣೇಶ್ ಸ್ಪರ್ಧಿಸಿ ಜಯಗಳಿಸಿದ್ದರು. ಈಗ 2ನೇ ಬಾರಿಗೆ ಪ್ರಾಣೇಶ್ ಎಂಎಲ್ಸಿ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದಾರೆ.

ಗಾಯತ್ರಿ ಶಾಂತೇಗೌಡ ಈ ಹಿಂದೆ ಎರಡು ಬಾರಿ ಎಂಎಲ್ಸಿ ಚುನಾವಣೆಗೆ ಸ್ಪರ್ಧಿಸಿ, ಒಮ್ಮೆ ಪರಾಭಾವಗೊಂಡು ಈಗ ಮೂರನೇ ಬಾರಿಗೆ ಅಖಾಡಕ್ಕೆ ಇಳಿದಿದ್ದಾರೆ. ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೊದಲ ಬಾರಿ ಸ್ಪರ್ಧಿಸಿದ್ದ ಗಾಯತ್ರಿ ಶಾಂತೇಗೌಡ ಬಿಜೆಪಿ ಅಭ್ಯರ್ಥಿ ಎಂ.ಎಸ್.ಬೋಜೇಗೌಡ ವಿರುದ್ಧ ಗೆಲುವು ಸಾಧಿಸಿದ್ದರು. ನಂತರ ಬಿಜೆಪಿಯ ಎಂ ಕೆ ಪ್ರಾಣೇಶ್ ವಿರುದ್ಧ ಅಲ್ಪಮತಗಳ ಅಂತರದಲ್ಲಿ ಗಾಯತ್ರಿ ಶಾಂತೇಗೌಡ ಸೋಲನುಭವಿಸಿದ್ದರು. ಇವರು ಈಗ ಮೂರನೇ ಬಾರಿಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಚುನಾವಣಾ ಕಣದಲ್ಲಿದ್ದಾರೆ.

ಒಂದುವೇಳೆ ಜೆಡಿಎಸ್ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಿಳಿಸದೇ ಹೋದರೆ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳ ನಡುವೆ ನೇರ ಹಣಾಹಣಿ ಏರ್ಪಡಲಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಮೂರೂ ಪಕ್ಷಗಳು ಸಾಕಷ್ಟು ಪ್ರಾಬಲ್ಯ ಹೊಂದಿರುವುದರಿಂದ ಈ ಬಾರಿ ಯಾವೆಲ್ಲಾ ಬೆಳವಣಿಗೆ ನಡೆಯಲಿದೆ ಮತ್ತು ಯಾರಿಗೆ ಗೆಲುವಿನ ಹಾರ ಬೀಳಲಿದೆ ಎಂಬುದು ಕುತೂಹಲ ಮೂಡಿಸಿದೆ

“ಜೆಡಿಎಸ್ ಪಕ್ಷದಿಂದ ಅಭ್ಯರ್ಥಿ ಘೋಷಣೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಿದ್ದಾರೆ. ನಾಳೆಯೊಳಗೆ ಘೋಷಿಸಬಹುದು. ಏನೇ ಆದರೂ ವರಿಷ್ಠರ ತೀರ್ಮಾನಕ್ಕೆ ಬದ್ಧವಾಗಿ ಪಕ್ಷದ ಕಾರ್ಯಚಟುವಟಿಕೆ ನಡೆಯಲಿದೆ”

-ರಂಜನ್ ಅಜಿತ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ.

Spread the love

Related Articles

Leave a Reply

Your email address will not be published. Required fields are marked *

Back to top button