
ಕಠ್ಮಂಡು: ಯೋಗಗುರು ಬಾಬಾ ರಾಮ್ ದೇವ್ ಅವರ ಎರಡು ಟಿವಿ ಚಾನೆಲ್ ಗಳು ಅನುಮತಿ ಪಡೆಯದೇ ಮತ್ತು ನೋಂದಣಿಯಾಗದೆ ನಿಯಮಾವಳಿಯನ್ನು ಮೀರಿ ದೇಶದಲ್ಲಿ ಕಾರ್ಯಾರಂಭಿಸಿರುವುದು ಸಾಬೀತಾದಲ್ಲಿ ಚಾನೆಲ್ ಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನೇಪಾಳ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಇಲಾಖೆಯ ಮಹಾನಿರ್ದೇಶಕ ಅಧಿಕಾರಿ ಗೊಗನ್ ಬಹದ್ದೂರು ಹಮಲ್ ತಿಳಿಸಿದ್ದಾರೆ.
ಯೋಗ ಸಂಬಂಧಿ ಹಾಗೂ ಧಾರ್ಮಿಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವ ಉದ್ದೇಶದಿಂದ ಆಸ್ಥಾ ನೇಪಾಳ ಮತ್ತು ಪತಂಜಲಿ ನೇಪಾಳ ಟಿವಿಯನ್ನು ಜಂಟಿಯಾಗಿ ಉದ್ಘಾಟಿಸಲಾಗಿತ್ತು. ಬಾಬಾ ರಾಮ್ ದೇವ್ ಮತ್ತು ಅವರ ಆಪ್ತ ಆಚಾರ್ಯ ಬಾಲಕೃಷ್ಣ ನೇತೃತ್ವದಲ್ಲಿ ಆಯೋಜಿಸಿದ್ದ ಉದ್ಘಾಟನೆ ಕಾರ್ಯಕ್ರಮದಲ್ಲಿ ನೇಪಾಳದ ಪ್ರಧಾನಿ ಶೇರ್ ಬಹದ್ದೂರ್ ದೇವೂಬಾ ಮತ್ತು ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಮಾವೋವಾದಿಯ ಕೇಂದ್ರ ಅಧ್ಯಕ್ಷ ಪುಷ್ಪಕಮಲ್ ದಹಾಲ್ ಪ್ರಚಂಡ ಪಾಲ್ಗೊಂಡಿದ್ದರು.
ಆದರೆ ಚಾನೆಲ್ ಗಳು ನೋಂದಣಿಗೆ ಇದುವರೆಗೂ ಆರ್ಜಿ ಸಲ್ಲಿಸಿಲ್ಲ, ಮತ್ತು ಕಾರ್ಯಾರಂಭಕ್ಕೆ ಸಂಬಂಧಿಸಿ ಯಾವುದೇ ನಿಯಮಾವಳಿಯನ್ನು ಅನುಸರಿಸಿಲ್ಲ. ಕಂಪನಿ ರಿಜಿಸ್ಟ್ರಾರ್ ಕಚೇರಿ ಮೂಲಕ ದೃಢೀಕರಣ ಪಡೆಯಲಾಗಿದೆ ಎಂದು ಪತಂಜಲಿ ಯೋಗಪೀಠ ನೇಪಾಳ ಹೇಳುತ್ತಿದೆ. ಈ ಹೇಳಿಕೆಯನ್ನು ನಂಬಲಾಗದು ಎಂದು ನೇಪಾಳದ ಗೊಗನ್ ಬಹದ್ದೂರು ಹಮಲ್ ಹೇಳಿದ್ದಾರೆ.
ಟಿವಿ ಚಾನೆಲ್ ಇನ್ನೂ ಕಾರ್ಯಾರಂಭಗೊಂಡಿಲ್ಲ. ನಾವು ಸದ್ಯ ತಾಂತ್ರಿಕವಾಗಿ ಸಿದ್ಧತೆ ಮಾಡಿಕೊಂಡಿದ್ದೇವೆ. ಪ್ರಸಾರ ಕಚೇರಿಯ ಉದ್ಘಾಟನೆಯಷ್ಟೇ ಮಾಡಿದ್ದೇವೆ ಎಂದು ಸಂಸ್ಥೆ ಸಮಜಾಯಿಸಿ ನೀಡಿದೆ.



