ಬಿಸಿಯೂಟಕ್ಕೆ ಕತ್ತರಿ ಹಾಕಿದ ಆರೋಪ; ಪ್ರಭಾರಿ ಮುಖ್ಯ ಶಿಕ್ಷಕ ಅಮಾನತು

ಕಲಬುರ್ಗಿ: ಮಕ್ಕಳಿಗೆ ಮಧ್ಯಾನದ ಬಿಸಿಯೂಟ ನೀಡದೆ ಕರ್ತವ್ಯಲೋಪ ಎಸಗಿರುವ ಆರೋಪ ಹಾಗೂ ಸೇವೆಗೆ ಅನಧಿಕೃತ ಗೈರು ಹಿನ್ನೆಲೆ ಅಫಜಲಪುರ ತಾಲುಕು ಬಿಲ್ವಾಡ್ (ಕೆ) ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರಿ ಮುಖ್ಯ ಗುರುಗಳಾಗಿದ್ದ ಚಂದ್ರಕಾಂತ ವಂದಾಲ್ರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಡಿಡಿಪಿಐ ಆದೇಶ ಹೊರಡಿಸಿದ್ದಾರೆ.
ನವೆಂಬರ್ 17ರಂದು ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ ಶಾಲೆಗೆ ಧೀಡಿರ ಭೇಟಿ ನೀಡಿದ್ದರು. ಈ ವೇಳೆ ಚಂದ್ರಕಾಂತ ವಂದಾಲ್ ಮಕ್ಕಳಿಗೆ ಮಧ್ಯಾನದ ಬಿಸಿಯೂಟ ನೀಡದಿರುವದು ಬೆಳಕಿಗೆ ಬಂದಿತ್ತು. ಅಲ್ಲದೆ ಕ್ಷೀರಭಾಗ್ಯ ಯೋಜನೆ ಅಡಿಯಲ್ಲಿ ಮಕ್ಕಳಿಗೆ ಹಾಲು ವಿತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದರು. ಮೇಲಾಧಿಕಾರಿಗಳ ಗಮನಕ್ಕೆ ತಾರದೆ ಸಪ್ಟೆಂಬರ್ 6 ರಿಂದ 11 ವರೆಗೆ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿ ಕರ್ತವ್ಯಲೋಪ ವೆಸಗಿರುವದು ಬೆಳಕಿಗೆ ಬಂದಿತ್ತು. ಸೇವೆಗೆ ಹಾಜರಾಗದೆ ಶಿಕ್ಷಕರ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವದು ಕಂಡುಬಂದಿತ್ತು.
ಕರ್ನಾಟಕ ನಾಗರಿಕ ಸೇವಾ ನಡತೆ ನಿಯಮಾವಳಿ 1957 ನಿಯಮ 12ರ ಅನ್ವಯ ಗೈರು ಹಾಜರಾಗಿರುವ ಕುರಿತಾಗಿ ಕಾರಣ ಕೇಳಿ ನೋಟಿಸ್ ನೀಡಿದರೂ ಲಿಖಿತ ಉತ್ತರ ನೀಡಿಲ್ಲದ ಕಾರಣ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ ಭಜಂತ್ರಿ ಅವರು ಚಂದ್ರಕಾಂತ ವಂದಾಲ್ರನ್ನು ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ.




