Latestಮೆಟ್ರೋರಾಜಕೀಯರಾಜ್ಯಸುದ್ದಿ

ಫೆಬ್ರವರಿಯಲ್ಲಿ ಬಿಬಿಎಂಪಿ ಚುನಾವಣೆ ಸಾಧ್ಯತೆ: ಹೆಚ್ ಡಿ ಕುಮಾರಸ್ವಾಮಿ

ಬೆಂಗಳೂರು: ಬರುವ ಫೆಬ್ರವರಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುತ್ತಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪಕ್ಷದ ಕಚೇರಿ ಜೆ.ಪಿ.ಭವನದಲ್ಲಿ ಜೆಡಿಎಸ್ ಸಂಘಟನಾ ಕಾರ್ಯಾಗಾರ ಜನತಾ ಸಂಗಮಗೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಹಿನ್ನೆಲೆಯಲ್ಲಿ ಪಕ್ಷದ ಸಂಘಟನೆಗೆ ಹೆಚ್ಚು ಗಮನ ನೀಡಲಾಗುತ್ತಿದೆ. ವಾರ್ಡ್ ವಿಂಗಡಣೆ ಕೆಲಸ ನಡೆಯುತ್ತಿದೆ ಎಂದರು.

ಬೆಂಗಳೂರಿನ ಏಳೆಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಜೆಡಿಎಸ್ ಉತ್ತಮ ಶಕ್ತಿ ಹೊಂದಿದೆ. ಉಳಿದ ಕ್ಷೇತ್ರಗಳಲ್ಲಿ ಬಲ ಹೆಚ್ಚಿಸಿಕೊಳ್ಳುವ ಬಗ್ಗೆಯೂ ಚರ್ಚಿಸುತ್ತಿದ್ದೇವೆ. ಪಾಲಿಕೆ ಚುನಾವಣೆಯಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ಬೆಂಗಳೂರು ನಗರಕ್ಕೆ ಜೆಡಿಎಸ್ ಪಕ್ಷವು ಅನೇಕ ಅಭಿವೃದ್ಧಿ ಯೋಜನೆಗಳನ್ನು ನೀಡಿದೆ. ಅಲ್ಲದೆ ಮುಂದಿನ ದಿನಗಳಲ್ಲಿ ಪಕ್ಷದ ಜವಾಬ್ದಾರಿ ಏನಿದೆ ಎಂಬ ಬಗ್ಗೆಯೂ ಇಂದಿನ ಕಾರ್ಯಗಾರದಲ್ಲಿ ಚರ್ಚಿಸಲಾಗುವುದು. ಜತೆಗೆ, ಪಕ್ಷದ ಸಂಘಟನೆಯಲ್ಲಿ ಎಲ್ಲೆಲ್ಲಿ ಲೋಪ ಆಗಿದೆ ಎನ್ನುವುದನ್ನು ಚರ್ಚೆ ಮಾಡಿ ಸರಿಪಡಿಸಲಾಗುವುದು ಎಂದರು.

ದೇವೇಗೌಡರು ಮುಖ್ಯಮಂತ್ರಿ ಹಾಗೂ ಪ್ರಧಾನಿ ಆಗಿದ್ದಾಗ ಹಾಗೂ ನಾನು ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರು ನಗರದ ಅಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳ ಮೂಲಕ ಸ್ಪಂದಿಸಿದ್ದೇವೆ. ಕುಡಿಯುವ ನೀರು, ಐಟಿ ಬಿಟಿ, ಮೆಟ್ರೋ, ಮೂಲಸೌಕರ್ಯ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಉತ್ತಮವಾಗಿ ಕೆಲಸ ಮಾಡಿದ್ದೇವೆ. ನಗರಕ್ಕೆ ಸಾಕಷ್ಟು ಕೆಲಸ ಮಾಡಿದ್ದಾಗ್ಯೂ ಆ ಬಗ್ಗೆ ಜನರಿಗೆ ಪೂರ್ಣ ಮಾಹಿತಿ ಇಲ್ಲ. ಪಕ್ಷದ ಸಾಧನೆಗಳನ್ನು ಜನತೆಗೆ ತಲುಪಿಸುವ ಕೆಲಸ ಮಾಡುವ ವಿಚಾರವಾಗಿ ಕಾರ್ಯಗಾರದಲ್ಲಿ ಚರ್ಚೆ ಮಾಡಲಾಗುತ್ತದೆ ಎಂದು ಅವರು ಹೇಳಿದರು.

ಬಿಟ್ ಕಾಯಿನ್ ತನಿಖೆ ನಡೆಯಲಿ:

ಬಿಟ್ ಕಾಯಿನ್ ವಿಚಾರದಲ್ಲಿ ಬರೀ ಗೊಂದಲ ಎಬ್ಬಿಸಲಾಗುತ್ತಿದೆ. ತನಿಖೆಯನ್ನು ಇಡಿಗೆ (ಜಾರಿ ನಿರ್ದೇಶನಾಲಯ) ಕೊಡಲಾಗಿದೆ ಅಂತಿದ್ದಾರೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಮುಖ್ಯ ಆರೋಪಿಯನ್ನು ಏಳೆಂಟು ಬಾರಿ ಅರೆಸ್ಟ್ ಮಾಡಿ ತನಿಖೆಗೆ ಒಳಪಡಿಸಲಾಗಿದೆ. ಸರ್ಕಾರವು ಈ ಹಗರಣದ ಬಗ್ಗೆ ನುರಿತ ತಜ್ಞರ ಸಹಕಾರ ಪಡೆದು ತನಿಖೆ ನಡೆಸಬೇಕು ಎಂದು ಕುಮಾರಸ್ವಾಮಿ ಅವರು ಸರಕಾರಕ್ಕೆ ಸಲಹೆ ನೀಡಿದರು.

ಆರೋಪಿ ಶ್ರೀಕಿ ಜೀವಕ್ಕೆ ಅಪಾಯ ಇದೆ. ಆತನಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂಬ ಸಿದ್ದರಾಮಯ್ಯ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, “ಇಷ್ಟು ವರ್ಷ ಆತನ ಜೀವಕ್ಕೆ ಅಪಾಯ ಇರಲಿಲ್ಲ. ಈಗ ಅವನಿಗೆ ಜೀವ ಬೆದರಿಕೆ ಇದೆ ಎಂದರೆ ಹೇಗೆ? ಕಾಂಗ್ರೆಸ್ ಪಕ್ಷಕ್ಕೆ ಈ ಬಗ್ಗೆ ನಿಖರ ಮಾಹಿತಿ ಇರಬೇಕು. ರಕ್ಷಣೆ ಕೊಡೋದು ತಪ್ಪಲ್ಲ, ಕೊಡಲಿ. ಇದುವರೆಗೆ ಎಂತೆಂಧವರಿಗೋ ರಕ್ಷಣೆ ನೀಡಲಾಗಿದೆ. ಇವರಿಗೂ ಕೊಡಲಿ, ಬೇಡ ಅಂದವರು ಯಾರು?” ಎಂದರು.

ನನ್ನ ಗ್ರಾಮ ವಾಸ್ತವ್ಯಕ್ಕೆ ಗಾಂಧಿ ಸ್ಪೂರ್ತಿ:

ಪೇಜಾವರ ಶ್ರೀಗಳ ಬಗ್ಗೆ ಹಾಗೂ ತಮ್ಮ ಗ್ರಾಮ ವಾಸ್ತವ್ಯದ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, “ಮುಖ್ಯಮಂತ್ರಿ ಆಗಿದ್ದಾಗ ನಾನು ಮಾಡಿದ ಗ್ರಾಮ ವಾಸ್ತವ್ಯಕ್ಕೆ ಮಹಾತ್ಮ ಗಾಂಧೀಜಿ ಅವರೇ ಸ್ಪೂರ್ತಿ ಮತ್ತು ಆದರ್ಶ. ಗ್ರಾಮ ವಾಸ್ತವ್ಯ ಅನ್ನೋದು ನಾಟಕೀಯವಾಗಿ ಮಾಡಿಲ್ಲ ಆತ್ಮತೃಪ್ತಿಗಾಗಿ, ಜನರ ಕೆಲಸ ಮಾಡುವುದಕ್ಕೆ ನಾನು ಆ ಕಾರ್ಯಕ್ರಮ ಮಾಡಿದ್ದು” ಎಂದು ಸ್ಪಷ್ಟಪಡಿಸಿದರು.

ನನ್ನ ಗ್ರಾಮ ವಾಸ್ತವ್ಯದಿಂದ ಅನೇಕರಿಗೆ ಅನುಕೂಲವಾಗಿದೆ. ಯಾರನ್ನೋ ಮೆಚ್ಚಿಸಲಿಕ್ಕೆ ನಾನು ಗ್ರಾಮ ವಾಸ್ತವ್ಯ ಮಾಡಲಿಲ್ಲ ಎಂದ ಅವರು; ಆ ವಿಚಾರಗಳ ಬಗ್ಗೆ ಚರ್ಚೆ ಮಾಡುವ ಅಗತ್ಯ ಇರಲಿಲ್ಲ. ಮುಖ್ಯವಾಗಿ ಧರ್ಮ ಹಾಗೂ ಧಾರ್ಮಿಕ ಗುರುಗಳ ಬಗ್ಗೆ ಹೀಗೆ ಮಾತನಾಡುವುದು ಸರಿಯಲ್ಲ ಎಂದರು.

Spread the love

Related Articles

Leave a Reply

Your email address will not be published. Required fields are marked *

Back to top button