ಬಿಟ್ ಕಾಯಿನ್ ಹಗರಣ ಮುಚ್ಚಿಹಾಕಲು ಬಿಜೆಪಿ-ಕಾಂಗ್ರೆಸ್ ಯತ್ನ; ಹೆಚ್ಡಿಕೆ ಆರೋಪ

ಬೆಂಗಳೂರು: ಬಹುಕೋಟಿ ಬಿಟ್ ಕಾಯಿನ್ ಹಗರಣ, ರಾಜಕೀಯ ಪಕ್ಷಗಳ ನಡುವೆ ಕೆಸರೆರಚಾಟ ಹಾಗೂ ತೀವ್ರ ವಾಗ್ವಾದಕ್ಕೆ ಅವಕಾಶ ಕಲ್ಪಿಸಿದೆ.
ಮಾಧ್ಯಮಗಳಲ್ಲಿ ಹಗರಣ ಭಾರಿ ಸದ್ದು ಮಾಡುತ್ತಿದ್ದರೂ, ಮಗುಮ್ಮಾಗಿಯೇ ಉಳಿದಿರುವ ಹಗರಣದ ಹೂರಣವನ್ನು ಬಯಲಿಗೆಳೆಯುವಲ್ಲಿ ಆಡಳಿತರೂಢ ಬಿಜೆಪಿ ಸೇರಿದಂತೆ ಪ್ರತಿಪಕ್ಷಗಳು ವಿಫಲವಾಗಿವೆ. ಇದರ ನಡುವೆಯೇ ಪ್ರಕರಣವನ್ನು ಮುಚ್ಚಿಹಾಕಲು ರಾಷ್ಟ್ರೀಯ ಪಕ್ಷಗಳಿಂದ ಬಿರುಸಿನ ಪ್ರಯತ್ನ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಪಕ್ಷದ ರಾಜ್ಯ ಕಚೇರಿಯಲ್ಲಿ ನಡೆಯುತ್ತಿರುವ ‘ಜನತಾ ಪರ್ವ 1.O’ ದ ಎರಡನೇ ಹಂತದ ಸಂಘಟನಾ ಕಾರ್ಯಗಾರ ‘ಜನತಾ ಸಂಗಮ’ದ ಮೂರನೇ ದಿನ ಸುದ್ದಿಗಾರರ ಜತೆ ಮಾತನಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿವೆ. ಆ ಮೂಲಕ ಇಡೀ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಲು ಪ್ರಯತ್ನ ಮಾಡುತ್ತಿವೆ ಎಂದರು.
ಕೆಲ ದಿನಗಳಿಂದ ಎರಡೂ ರಾಷ್ಟ್ರೀಯ ಪಕ್ಷಗಳ ನಾಯಕರ ಹೇಳಿಕೆಗಳನ್ನು ಗಮನಿಸುತ್ತಿದ್ದೇನೆ. ರಾಜ್ಯದಲ್ಲಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಯುತ್ತಿದ್ದರೆ, ದಿಲ್ಲಿಯಲ್ಲಿ ರಫೆಲ್ ಯುದ್ಧ ವಿಮಾನಗಳ ಖರೀದಿ ಬಗ್ಗೆ ಚರ್ಚೆ ನಡೆಯುತ್ತಿದೆ. ಎರಡೂ ಪಕ್ಷಗಳ ಕೆಸರೆರಚಾಟದಲ್ಲಿ ನಿರತವಾಗಿವೆ ಎಂದು ಹೇಳಿದರು.
ಬಿಟ್ ಕಾಯಿನ್ ಹಗರಣ ಬಗ್ಗೆ ಗಂಭೀರ ನಿಲುವು ತಾಳಬೇಕು. ಸರಕಾರ ಪ್ರಾರಂಭಿಕ ಹಂತದಲ್ಲಿ ಪ್ರಚಾರಕ್ಕೆ ಮಾತ್ರ ಚರ್ಚೆ ಮಾಡಿ ನಂತರ ನಿರ್ಲಕ್ಷ್ಯ ಮಾಡುವುದು ಬೇಡ. 2016-17ರಿಂದಲೂ ಈ ಹಗರಣದ ಬಗ್ಗೆ ಚರ್ಚೆ ನಡೆಯುತ್ತಿದೆ. ಆಗಲೂ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು. ಆಗಲೇ ಅವರು ಕಠಿಣವಾಗಿ ವರ್ತಿಸಿ ಪ್ರಾರಂಭಿಕ ಹಂತದಲ್ಲೇ ಕ್ರಮ ತೆಗೆದುಕೊಂಡಿದ್ದರೆ ಇಷ್ಟು ದೊಡ್ಡ ಪ್ರಮಾಣದಲ್ಲಿ ದಂಧೆ ನಡೆಯುತ್ತಿರಲಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ತನಿಖೆಯಲ್ಲಿ ಜಾರಿ ನಿರ್ದೇಶನಾಲಯ ತೊಡಗಿದೆ ಎನ್ನುವ ಮಾಹಿತಿ ಇದೆ. ಸರಕಾರ ನಡೆಸುವವರು, ಸರಕಾರದ ಅಧೀನ ಸಂಸ್ಥೆಗಳು ಜನರಿಗೆ ಸರಿಯದ ದಿಕ್ಕಿನಲ್ಲಿ ಕೆಲಸ ಮಾಡಬೇಕು. ನಾನಂತೂ ನಿಖರ ಮಾಹಿತಿ ಇಲ್ಲದೆ ಯಾವುದೇ ಹೇಳಿಕೆ ನೀಡಲು ತಯಾರಿಲ್ಲ. ಆದರೆ, ಜನರ ಮುಂದೆ ವಾಸ್ತವಾಂಶ ಇಡಲು ಯಾರು ತಯಾರಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರ ಸರಕಾರದ ಆದೇಶದ ಮೇರೆಗೆ ಇಡಿ ತನಿಖೆಗೆ ಶಿಫಾರಸು ಮಾಡಿದ್ದಾರೋ ಅಥವಾ ರಾಜ್ಯ ಸರಕಾರವೇ ಶಿಫಾರಸು ಮಾಡಿದೆಯೋ ಗೊತ್ತಿಲ್ಲ. ಇದರ ಮೇಲೆ ಕೂಡ ಈಗ ಚರ್ಚೆ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಎಲ್ಲಾ ಮಾಹಿತಿ ರವಾನೆಯಾಗಿದೆ. ಆದರೆ, ರಾಜ್ಯ ಸರಕಾರ ಏನು ಮಾಡುತ್ತದೆಯೋ ನೋಡೋಣ ಎಂದು ಹೆಚ್ ಡಿಕೆ ಅವರು ಹೇಳಿದರು.
ಕಾಂಗ್ರೆಸ್ ನಾಯಕರು ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ, ಹಿಂದೆ ಅರ್ಕಾವತಿ ಡಿನೋಟಿಫಿಕೇಷನ್ ಬಗ್ಗೆ ತನಿಖೆ ನಡೆಸಿದ ನ್ಯಾ. ಕೆಂಪಣ್ಣ ಆಯೋಗದ ವರದಿ ಏನಾಯಿತು? ಬಿಟ್ ಕಾಯಿನ್ ತನಿಖೆ ವರದಿಯ ಗತಿಯೂ ಅಷ್ಟೇ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮೇಲ್ಮನೆ ಚುನಾವಣೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸಿದೆ ಎಂದ ಕುಮಾರಸ್ವಾಮಿ, ಸದ್ಯಕ್ಕೆ ಜೆಡಿಎಸ್ ಗೆ ಪಕ್ಷ ಸಂಘಟನೆ ಮುಖ್ಯ. ನನ್ನ ಗುರಿ ಏನಿದ್ದರೂ 2023ರ ಚುನಾವಣೆ ಎಂದು ಸ್ಪಷ್ಟಪಡಿಸಿದರು.
