ಅಡಿಕೆ ಕಳವು ಮಾಡಿದ್ದ ನಾಲ್ವರು ಆರೋಪಿಗಳ ಬಂಧನ..!

ದಾವಣಗೆರೆ: ಅಡಿಕೆ ಕಳವು ಮಾಡಿದ್ದ ನಾಲ್ವರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ತಿಂಗಳು 14ರಂದು ಹೊನ್ನಾಳಿ ತಾಲೂಕಿನ ಬೀರಗೊಂಡನಹಳ್ಳಿ ಗ್ರಾಮದ ಸತೀಶ್ ಎಂಬುವವರ ಮನೆ ಮುಂಭಾಗದಲ್ಲಿ ಅಡಿಕೆ ಒಣಗಲು ಹರಡಿದ್ದರು. ಸುಮಾರು 5ರಿಂದ ಐದೂವರೆ ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿಕೊಂಡು ವಾಹನದಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಈ ಪ್ರಕರಣದ ಜೊತೆಗೆ ಇತರ ಮೂರು ಅಡಿಕೆ ಕಳ್ಳತನ ಭೇದಿಸಿದ್ದಾರೆ. ಬಂಧಿತ ಆರೋಪಿಗಳಿಂದ ಮೂರು ಲಕ್ಷ ರೂಪಾಯಿ ಮೌಲ್ಯದ ಅಡಿಕೆ, ಕಾರು ವಶಪಡಿಸಿಕೊಂಡಿದ್ದಾರೆ.
ಚನ್ನಗಿರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸಂತೋಷ್ ಮಾರ್ಗದರ್ಶನದಲ್ಲಿ ಹೊನ್ನಾಳಿ ಸಿಪಿಐ ದೇವರಾಜ್, ಎಸ್ ಐ ಬಸನಗೌಡ ಬಿರಾದಾರ್, ಪೊಲೀಸ್ ಸಿಬ್ಬಂದಿಯಾದ ಧರ್ಮಪ್ಪ, ರಾಜು, ಜಗದೀಶ್, ಬೋಜಪ್ಪ ಕಿಚಡಿ, ಗಾಳಿ ಯೋಗೀಶ್, ಚೇತನ್ ಕುಮಾರ್, ಮೌನೇಶಾಚಾರಿ, ಶಾಂತರಾಜು, ರಾಘವೇಂದ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.




