
ಮೈಸೂರು: ಮೇಕೆದಾಟು ಯೋಜನೆಯನ್ನು ತುರ್ತಾಗಿ ಆರಂಭಿಸಬೇಕು ಇಲ್ಲವಾದರೆ ಪಾದಯಾತ್ರೆ ಮಾಡುತ್ತೇವೆ ಎಂದು ರಾಜ್ಯ ಸರ್ಕಾರಕ್ಕೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದ ಅವಧಿಯಲ್ಲಿ ಡಿಪಿಆರ್ ಮುಗಿಸಿದ್ದೇವೆ. ಆಗ ಡಿಪಿಆರ್ ಮಾಡುವುದು ತಡವಾಗಿತ್ತು. ಆದರೂ ನಾವು ಡಿಪಿಆರ್ ಮಾಡಿ ಮುಗಿಸಿದ್ದೇವೆ. ಈಗ ಇವರು ಕಾಮಗಾರಿ ಆರಂಭಿಸಲು ವಿಳಂಬ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ತಡವಾಗಿ ಡಿಪಿಆರ್ ಮಾಡಿದ್ದಾರೆ ಎಂಬ ಸಿಎಂ ಹೇಳಿಕೆಯಲ್ಲಿ ಅರ್ಥ ಇಲ್ಲ ಎಂದು ಕುಟುಕಿದರು. ನಾವು ಈಗ ಕಾಮಗಾರಿ ಆರಂಭಿಸಿ ಎಂದು ಕೇಳುತ್ತಿದ್ದೇವೆ ಎಂದರು.
ಸರ್ಕಾರ ಯಾಕೆ ವಿಳಂಬ ಮಾಡುತ್ತಿದೆ. ಒತ್ತಡ ಹೇರಲೇಬೇಕಾದ ಸನ್ನಿವೇಶದಲ್ಲಿದ್ದೇವೆ, ಹಾಗಾಗಿ ಒತ್ತಡ ಹೇರಿದ್ದೇವೆ. ಸರ್ಕಾರದ ಮೇಲೆ ಒತ್ತಡ ಹೇರದಿದ್ದರೆ ಇವರು ಕೆಲಸ ಆರಂಭಿಸುವುದಿಲ್ಲ. ಕೋರ್ಟ್ ಅಡ್ಡಿ, ಅದು ಇದು ಎಂದು ಸುಳ್ಳು ಹೇಳ್ತಾರೆ. ರಾಜ್ಯದಲ್ಲಿ ಸದ್ದು ಮಾಡ್ತಿರುವ ಬಿಟ್ ಕಾಯಿನ್ ವಿಚಾರದಲ್ಲಿ ಆಡಳಿತ- ವಿರೋಧ ಪಕ್ಷದವರು ಯಾರೇ ಇರಲಿ. ನೀವೂ ಮೊದಲು ತನಿಖೆ ಆರಂಭಿಸಿ. ಚುರುಕಾಗಿ ಯಾಕೆ ತನಿಖೆ ಆರಂಭಿಸುತ್ತಿಲ್ಲ ಎಂದರು.
ನನ್ನ ಬಳಿಯೇ ಸರ್ಕಾರ ಸಾಕ್ಷಿ ಕೇಳುತ್ತಿದೆ. ಅದರ ಸಾಕ್ಷಿ ಹುಡುಕಬೇಕಾದವರು, ತನಿಖೆ ಮಾಡಬೇಕಾದವರು ತನಿಖಾಧಿಕಾರಿಗಳು. ಆ ಕೆಲಸವನ್ನು ಸರ್ಕಾರ ಮಾಡಿಸಲಿ. ನನ್ನ ಬಳಿ ಇರುವ ಮಾಹಿತಿಯನ್ನು ಅಗತ್ಯವಿದ್ದರೆ ಕೋರ್ಟ್ಗೆ ಕೊಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ಇನ್ನು ಸಾಕ್ಷಿಗಳು ಬೇಕಿವೆ. ನಾನು ಸಾಕ್ಷಿಗಳ ಸಂಗ್ರಹದಲ್ಲಿ ಇದ್ದೇನೆ. ನಾನು ನನ್ನ ಬಳಿ ಇರುವ ವಿಚಾರವನ್ನ ಹಂಚಿಕೊಳ್ಳುತ್ತಿದ್ದೇನೆ ಅಷ್ಟೇ ಎಂದು ತಿಳಿಸಿದರು.
ಶಾಸಕ ಜಿಟಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಒಂದೇ ವೇದಿಕೆಯಲ್ಲಿ ಭಾಗಿ ವಿಚಾರ ಮಾತನಾಡಿ, ನಾವು ಯಾಕೆ ಒಂದೇ ವೇದಿಕೆಯಲ್ಲಿ ಬರಬಾರದ? ಅವರು ಕಾಂಗ್ರೆಸ್ ಸೇರುತ್ತಾರೆ, ಬಿಡುತ್ತಾರೆ ಅದು ಬೇರೆ ವಿಚಾರ. ಗುಬ್ಬಿ ಶಾಸಕ ಶ್ರೀನಿವಾಸ್ಗೆ ಅನೌಪಚಾರಿಕವಾಗಿ ಪಕ್ಷಕ್ಕೆ ಆಹ್ವಾನಿಸಿದ್ದೆ. ಅದನ್ನು ಇದನ್ನು ನೀವು ಹೋಲಿಸಬೇಡಿ ಎಂದರು.
ಬೊಮ್ಮಾಯಿ ಸರ್ಕಾರದ ಸ್ಥಿರತೆ ವಿಚಾರದಲ್ಲಿ ಪ್ರತಿಕ್ರಿಯಿಸಿ ಪಕ್ಕದ ಕ್ಷೇತ್ರ, ಸ್ವಂತ ಜಿಲ್ಲೆಯಲ್ಲಿ ಮೊನ್ನೆ ಸೋತಿದ್ದಾರೆ. ನೀವು ಯಾವ ರೀತಿ ವಿಶ್ಲೇಷಣೆ ಮಾಡ್ತಿರೋ ಮಾಡಿಕೊಳ್ಳಿ. ಸಂಪುಟ ಪುನರ್ ರಚನೆ ಆಗಲಿ, ವಿಸ್ತರಣೆ ಆಗಲಿ ನಮಗೆ ಸಂಬಂಧ ಇಲ್ಲ. ಇತ್ತೀಚೆಗೆ ಸಿಎಂ ಅವರ ಹೇಳಿಕೆ ನೋಡಿದೆ. ಯಾವುದೇ ವಿಸ್ತರಣೆ, ಪುನರ್ ರಚನೆ ಇಲ್ಲ ಅಂತ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.



